ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಬದಿ ಸಿಗುವ ಚುರುಮುರಿ, ಮೆಣಸಿನಕಾಯಿ ಬಜ್ಜಿ, ವಡೆ, ಇನ್ನೂ ಮುಂತಾದ ತಿಂಡಿಗಳನ್ನು ದಿನಪತ್ರಿಕೆಗಳನ್ನು ಕಟ್ಟಿ ಕೊಡುವುದು ರೂಢಿಯಲ್ಲಿದೆ. ಹೀಗೆ ದಿನಪತ್ರಿಕೆಗಳಲ್ಲಿ ಪ್ಯಾಕ್ ಮಾಡಿದ ಆಹಾರ ತುಂಬಾ ಅಪಾಯಕಾರಿ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಬಹಿರಂಗಪಡಿಸಿದೆ.
ಮನೆಯಲ್ಲಿಯೂ ಸಹ ಕೆಲವರು ತಿಂಡಿ ತಯಾರಿಸುವಾಗ ಕರಿದ ಪದಾರ್ಥಗಳನ್ನು ಎಣ್ಣೆ ಹೀರಿಕೊಳ್ಳಲು ಪತ್ರಿಕೆಗಳಲ್ಲಿ ಹಾಕುತ್ತಾರೆ. ಇದು ತುಂಬಾ ಅಪಾಯಕಾರಿ ಎಂದು ಎಫ್‌ಎಸ್‌ಎಸ್‌ಎಐ ಎಚ್ಚರಿಸಿದೆ.
ಪೇಪರ್‌ಗಳಲ್ಲಿ ಬಳಸುವ ಮುದ್ರಣ ಶಾಯಿ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿದ್ದು, ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ದೇಶಾದ್ಯಂತ ಗ್ರಾಹಕರು ಮತ್ತು ಆಹಾರ ಮಾರಾಟಗಾರರು ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು ಪತ್ರಿಕೆಯನ್ನು ಬಳಸುತ್ತಾರೆ. ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಎಫ್‌ಎಸ್‌ಎಸ್‌ಎಐ ವರ್ತಕರಿಗೆ ಸೂಚಿಸಿದೆ.
ಯಾವುದೇ ಸಂದರ್ಭದಲ್ಲೂ ಆಹಾರ ಪ್ಯಾಕ್ ಮಾಡಲು ದಿನಪತ್ರಿಕೆಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿದೆ. ಪ್ರಿಂಟಿಂಗ್ ಇಂಕ್ ನಲ್ಲಿ ಸೀಸ, ಹೆವಿ ಲೋಹಗಳು ಹಾಗೂ ಹಲವು ರಾಸಾಯನಿಕಗಳು ಆಹಾರದ ಜೊತೆಗೆ ದೇಹಕ್ಕೆ ಹೋದರೆ ತುಂಬಾ ಅಪಾಯಕಾರಿ ಎಂಬ ಅಂಶ ಬಹಿರಂಗವಾಗಿದೆ. ಈ ಶಾಯಿಯಲ್ಲಿರುವ ರಾಸಾಯನಿಕವು ಆಹಾರದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದು ತಕ್ಷಣದ ಪರಿಣಾಮ ಬೀರದಿದ್ದರೂ ನಂತರದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ಪತ್ರಿಕೆಗಳನ್ನು ಮನೆ-ಮನೆಗೆ ತಲುಪಿಸುವಾಗ ಅನೇಕ ಸ್ಥಳಗಳಲ್ಲಿ ಸಂಚರಿಸುತ್ತವೆ. ಈ ಸಂದರ್ಭದಲ್ಲಿ ವಿವಿಧ ಪರಿಸರ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುತ್ತವೆ. ಅವುಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಬರುವ ಸಾಧ್ಯತೆಗಳು ತುಂಬಾನೇ ಹೆಚ್ಚು. ಸೂಕ್ಷ್ಮಜೀವಿಗಳು ಕೂಡ ಸಂಗ್ರಹಗೊಳ್ಳುತ್ತವೆ. ಈ ವಿಷಯವನ್ನು ಗಮನಿಸುವಂತೆ ಎಫ್‌ಎಸ್‌ಎಸ್‌ಎಐ ಸಲಹೆ ನೀಡಿದೆ.