September 4, 2026
Friday, September 4, 2026
spot_img

ಭಾರತಕ್ಕೂ ಕಾಡಿದ ಇಂಧನ ಭೀತಿ: ಹಾರ್ಮುಜ್ ಬದಲಿಗೆ ಭೂಗತ ಪೈಪ್‌ಲೈನ್‌ಗಳ ಮೊರೆ ಹೋದ ಗಲ್ಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಹಾಗೂ ಇರಾನ್ ನಡುವಿನ ಸೈನಿಕ ಸಂಘರ್ಷವು ವಿಶ್ವದ ಪ್ರಮುಖ ಇಂಧನ ಸಾಗಣೆ ಜಾಲವಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಿದೆ. ಈ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ಏರುಪೇರಾಗಿದ್ದು, ಯುಎಇ, ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳು ಇರಾನ್ ನಿಯಂತ್ರಣದ ಈ ಜಲಮಾರ್ಗದ ಮೇಲಿನ ಅವಲಂಬನೆಯನ್ನು ಶಾಶ್ವತವಾಗಿ ತೊರೆಯಲು ಮುಂದಾಗಿವೆ. ಈ ಮುಂಚೆ ಪ್ರಪಂಚದ ಶೇ. 20 ರಷ್ಟು ಕಚ್ಚಾ ತೈಲ ಮತ್ತು ಭಾರತದ ಬಹುಪಾಲು ಎಲ್‌ಎನ್‌ಜಿ (LNG) ಇದೇ ಮಾರ್ಗವಾಗಿ ಬರುತ್ತಿತ್ತು.

ಯುಎಇಯ ಬೃಹತ್ ‘ವೆಸ್ಟ್-ಈಸ್ಟ್’ ಯೋಜನೆ

ಪ್ರಾದೇಶಿಕ ಸುರಕ್ಷತೆಗೆ ಧಕ್ಕೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಯುಎಇ, ಜಲಸಂಧಿಯನ್ನು ಅವಲಂಬಿಸದ 252 ಮೈಲಿ ಉದ್ದದ ‘ಪಶ್ಚಿಮ-ಪೂರ್ವ’ ಭೂಗತ ಪೈಪ್‌ಲೈನ್ ನಿರ್ಮಾಣವನ್ನು ತೀವ್ರಗೊಳಿಸಿದೆ. ಈಗಾಗಲೇ ಅರ್ಧದಷ್ಟು ಕಾಮಗಾರಿ ಮುಗಿದಿದ್ದು, 2027ರ ಒಳಗಾಗಿ ಇದನ್ನು ಪೂರ್ಣಗೊಳಿಸಲು ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಲೀದ್ ಆದೇಶಿಸಿದ್ದಾರೆ.

ದುಪ್ಪಟ್ಟಾಗಲಿದೆ ರಫ್ತು ಸಾಮರ್ಥ್ಯ

ಹೊಸ ಪೈಪ್‌ಲೈನ್ ಯೋಜನೆಯು ಹಾಲಿ ಇರುವ ಫುಜೈರಾ ನೆಟ್‌ವರ್ಕ್ ಜೊತೆ ವಿಲೀನಗೊಳ್ಳಲಿದ್ದು, ಇದರಿಂದಾಗಿ ಯುಎಇಯ ತೈಲ ರಫ್ತು ಸಾಮರ್ಥ್ಯ ದಿನಕ್ಕೆ 3.6 ಮಿಲಿಯನ್ ಬ್ಯಾರೆಲ್‌ಗಳಿಗೆ ದ್ವಿಗುಣಗೊಳ್ಳಲಿದೆ. ಸೀಮಿತ ಮಾರ್ಗಗಳ ಮೇಲಿನ ಅವಲಂಬನೆ ತಗ್ಗಿಸಲು ಒಂದು ದಶಕದ ಹಿಂದೆಯೇ ಈ ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ಅಡ್ನೋಕ್ (ADNOC) ಮುಖ್ಯಸ್ಥ ಸುಲ್ತಾನ್ ಅಲ್ ಜಾಬರ್ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !