ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಹಾಸನಾಂಬೆ ದೇವಿಯ ದರುಶನ ನಾಳೆಯಿಂದ ಆರಂಭವಾಗಲಿದ್ದು, ಈ ಬಾರಿ ಏನೆಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಟಿಕೆಟ್ ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದರುಶನ ಸುಗಮವಾಗಿ ಸಾಗಲು ಎರಡು ರೀತಿ ಸ್ಪೆಷಲ್ ಟಿಕೆಟ್ ಮಾಡಲಾಗಿದೆ. ಒಂದು ಸಾವಿರ ರೂಪಾಯಿ ಹಾಗೂ 300 ರೂಪಾಯಿಯ ಟಿಕೆಟ್ ವ್ಯವಸ್ಥೆ ಇದೆ. ಇನ್ನು ಜಿಲ್ಲಾಡಳಿತದ ವತಿಯಿಂದಲೇ ಗಣ್ಯರಿಗೆ ದರುಶನ ಮಾಡಿಸಲಾಗುತ್ತದೆ. ಇದಕ್ಕಾಗಿ ಬೆಳಗ್ಗೆ 10.30 ರಿಂದ 12.30ರ ನಡುವಿನ ಎರಡು ಗಂಟೆಯನ್ನು ಗಣ್ಯರಿಗಾಗಿ ಮೀಸಲಿಡಲಾಗಿದೆ. ಇನ್ನು ಗೋಲ್ಡನ್ ಪಾಸ್ ಇರುವವರು ಬೆಳಗ್ಗೆ 8ರಿಂದ 10 ಗಂಟೆಯ ಒಳಗೆ ಬಂದು ದರುಶನ ಪಡೆಯಬಹುದು. ಈ ಕಾರ್ಡ್ ಹೊಂದಿರುವ ಒಬ್ಬರಿಗೆ ಮಾತ್ರ ದರುಶನಕ್ಕೆ ಅವಕಾಶ ಎಂದಿದ್ದಾರೆ. ಇನ್ನು ದೇವಿಯ ದರುಶನದ ಮೊದಲ ಹಾಗೂ ಕೊನೆಯ ದಿನ ಯಾವುದೇ ಶಿಷ್ಟಾಚಾರ, ಪಾಸ್ ವ್ಯವಸ್ಥೆ ಇರುವುದಿಲ್ಲ.
ಮೈಸೂರು ದಸರಾದಲ್ಲಿ ನಡೆದಂತೆ ಇಲ್ಲಿಯೂ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜೊತೆಗೆ ಕುಸ್ತು, ಕಬಡ್ಡಿ ಹಾಗೂ ವಾಲಿಬಾಲ್ ಗೇಮ್ ನಡೆಯಲಿದೆ. ಜೋಡೆತ್ತುಗಳ, ಹಳ್ಳಿಕಾರ್ ಪ್ರದರ್ಶನ ಇದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಪ್ರಸಾದದ ವಿಷಯಕ್ಕೆ ಬಂದರೆ ಎರಡು ಲಡ್ಡುವಿಗೆ 56 ರೂ. ರೇಟ್ ನಿಗದಿ ಮಾಡಲಾಗಿದೆ. ದೊನ್ನೆ ಪ್ರಸಾದಕ್ಕೆ 17 ರೂಪಾಯಿ ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.



