ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ ಒಂದರಂದು ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಕಠಿಣ ಷರತ್ತುಗಳನ್ನು ವಿಧಿಸಿ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಬೃಹತ್ ಸಮಾವೇಶ ನಡೆಯಲಿದೆ. ಒಟ್ಟಾರೆ ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ದೇಶದಲ್ಲಿರುವ ಎಲ್ಲ ಕೈ ಕಾರ್ಯಕರ್ತರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆಗೆ ಇಂಡಿ ಮುಂದಾಗಿದೆ.
ಪೊಲೀಸರ ಷರತ್ತುಗಳೇನು?
ನವೆಂಬರ್ ಒಂದರ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಐದು ಗಂಟೆವರೆಗೂ ಪ್ರತಿಭಟಿಸಲು ಅವಕಾಶ ಇದೆ. ಐದು ಗಂಟೆಯ ನಂತರ ಪ್ರೊಟೆಸ್ಟ್ ಮುಂದುವರಿಯುವಂತಿಲ್ಲ. ಜನ ಜಾಗ ಖಾಲಿ ಮಾಡಬೇಕು.
ಸಮಾವೇಶ ಮುಗಿದ ನಂತರ ಯಾವುದೇ ಕಾರ್ಯಕರ್ತರು ರಾಮಲೀಲಾ ಮೈದಾನದಲ್ಲಿ ರಾತ್ರಿಯಿಡೀ ತಂಗುವಂತಿಲ್ಲ. ಪ್ರವೇಶ ದ್ವಾರ, ಚೇರ್ಗಳ ಬಳಿ, ಮುಖ್ಯ ವೇದಿಕೆ ಇನ್ನಿತರ ಪ್ರಮುಖ ಪ್ರದೇಶಗಳ ಬಳಿ ಎಚ್ಡಿ ಕ್ಯಾಮರಾ ಕಡ್ಡಾಯ.
ಕುಡಿಯುವ ನೀರಿನ ಟ್ಯಾಂಕರ್ಗಳು, ಮಹಿಳೆಯರಿಗೆ ಬಾತ್ರೂಮ್ ವ್ಯವಸ್ಥೆ ಮಾಡಬೇಕು. ಜನರನ್ನು ನಿಯಂತ್ರಿಸುವ ಸ್ವಯಂಸೇವಕರು ಸಮವಸ್ತ್ರ ಅಥವಾ ಬ್ಯಾಡ್ಜ್ ಧರಿಸಬೇಕು.
ಸಂಚಾರ ಪೊಲೀಸರು ಹೇಳುವ ಜಾಗದಲ್ಲಿ ಗಾಡಿ ಪಾರ್ಕ್ ಆಗಬೇಕು, ರಾಮಲೀಲಾ ಮೈದಾನ ಬಿಟ್ಟು ಇನ್ನೆಲ್ಲೂ ಮೆರವಣಿಗೆ ಮಾಡುವಂತಿಲ್ಲ ಎನ್ನುವ ಷರತ್ತುಗಳನ್ನು ವಿಧಿಸಿದ್ದಾರೆ.



