ಹೊಸದಿಗಂತ ವರದಿ,ಅಂಕೋಲಾ:
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಂಕೋಲಾದ ವಿಠ್ಠಲ ಘಾಟ್, ಭಟ್ಕಳ ತಾಲೂಕಿನ ಮೂಡಭಟ್ಕಳ ಮತ್ತು ಕಾಯ್ಕಿಣಿ ಬಳಿ ಅಂಡರ್ಪಾಸ್ ನಿರ್ಮಾಣಕ್ಕೆ 47.48 ಕೋಟಿ ರೂ. ಮಂಜೂರಾತಿ ದೊರಕಿದ್ದು, ಸದ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಕುಮಟಾ ತಾಲೂಕಿನ ಹೊನ್ಮಾಂವ್ ಮತ್ತು ಮಾನೀರ ಸಮೀಪ ಹೊಸ ಸೇತುವೆ ನಿರ್ಮಾಣಕ್ಕೆ 9.1 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿಯ ಟೆಂಡರ್ ಪ್ರಕ್ರಿಯೆಗಳನ್ನೂ ಅಂತಿಮಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರವಾರದಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕುಸಿದು ಬಿದ್ದಿದ್ದ ಕಾಳಿ ಸೇತುವೆಯ ಅವಶೇಷಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಗಿದೆ. ಇಲ್ಲಿಯೂ ಹೊಸ ಸೇತುವೆ ನಿರ್ಮಾಣಕ್ಕೆ ಆದಷ್ಟು ಶೀಘ್ರದಲ್ಲಿ ಮಂಜೂರಾತಿ ಪಡೆದುಕೊಳ್ಳಲು ಎಲ್ಲ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.