ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿ ಪಕ್ಕದ ಗೋಟಗೋಡಿಕೊಪ್ಪದ ಹತ್ತಿರ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದ್ದ ಚಿರತೆಯ ಕಳೆಬರಹ ಯಲ್ಲಾಪುರ ಡಿಎಫ್‌ಒ ಅವರ ಸಮ್ಮುಖದಲ್ಲಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು.
ತಾಲೂಕಿನ ಗೋಟಗೋಡಿಕೊಪ್ಪದ ಹತ್ತಿರ ರಸ್ತೆ ಪಕ್ಕದಲ್ಲಿ ಶುಕ್ರವಾರ ಎರಡು ವರ್ಷದ ಗಂಡು ಚಿರತೆಯ ಮೃತದೇಹ ಪತ್ತೆಯಾಗಿತ್ತು.
ರಾತ್ರಿ ಸಮಯದಲ್ಲಿ ಅಪರಚಿತ ವಾಹನದ ಡಿಕ್ಕಿ ಹೊಡೆದಿದ್ದರಿಂದ ಚಿರತೆ ಸಾವನ್ನಪ್ಪಿರುವುದು ಧೃಡವಾಗಿದೆ. ಯಲ್ಲಾಪುರ ಡಿಎಫ್‌ಒ ಎಸ್ ಜಿ ಹೆಗಡೆ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ. ನ್ಯಾಯಾಲಯದ ಅನುಮತಿ ಪಡೆದು ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಎಸಿಎಫ್ ರವಿ ಹುಲಿಕೊಟೆ ಹೇಳಿದರು.
ಚಿರತೆ ಕೊಳೆತ ಸ್ಥಿತಿಯಲ್ಲಿತ್ತು. ದೇಹದಲ್ಲಿ ಗುಂಡಿನ ಕುರುಹುಗಳು ಇರಲಿಲ್ಲ. ಆದರೆ ತಲೆಗೆ ಪೆಟ್ಟು ಬಿದ್ದರಿಂದ ಮೃತಪಟ್ಟಿದೆ. ಯಾವುದೋ ವಾಹನ ಡಿಕ್ಕಿ ಹೊಡೆದಿರಬಹುದು. ಇದು ಎರಡ್ಮೂರ ದಿನಗಳ ಹಿಂದೆ ಮೃತಪಟ್ಟಿದೆ ಎಂದ ಪಶುವೈದ್ಯ ಕೃಷ್ಣಮೂರ್ತಿ ಹೆಗಡೆ ತಿಳಿಸಿದರು.
ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಎರಡ್ಮೂರು ದಿನಗಳ ಹಿಂದೆ ಚಿರತೆಯೊಂದು ಮೃತಪಟ್ಟು ಬಿದ್ದಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸ ಸಂಗತಿ. ಇದರಿಂದ ಅಧಿಕಾರಿಗಳ ನಿಷ್ಕಕಾಳಜಿ ಎದ್ದು ಕಾಣುತ್ತಿದೆ. ಸಾರ್ವಜನಿಕರು ಚಿರತೆಯ ಮೃತದೇಹ ನೋಡಿ ಇಲಾಖೆಯ ಗಮನಕ್ಕೆ ತಂದ ನಂತರ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪ್ರಜ್ಞಾವಂತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಚಿರತೆಯ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಡಿ.ಎಫ್‌ಒ ಎಸ್ ಜಿ ಹೆಗಡೆ, ಎಸಿಎಫ್ ರವಿ ಹುಲಿಕೋಟೆ, ಕಾತೂರ ಆರ್‌ಎಫ್‌ಒ ಮಂಜುನಾಥ ನಾಯ್ಕ, ಉಪವಲಯ ಅರಣ್ಯಾಧಿಕಾರಿಗಳು ಸೇರಿದಂತೆ ಇತರರಿದ್ದರು