ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫ್ರಿಕಾ ಖಂಡದ ನೈಜೀರಿಯಾ ಭೇಟಿ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಭೇಟಿ ನೀಡಿದ್ದಾರೆ.
ಮೋದಿಯವರು ಬ್ರೆಜಿಲ್ ತಲುಪುತ್ತಿದ್ದಂತೆಯೇ ಬ್ರೆಜಿಲ್‌ನಲ್ಲಿರುವ ಭಾರತೀಯ ರಾಯಭಾರಿ ಸುರೇಶ್ ರೆಡ್ಡಿ ನೇತೃತ್ವದ ಭಾರತೀಯ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.
ಬ್ರೆಜಿಲ್ ಭೇಟಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, G20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ಬಂದಿಳಿದಿದ್ದೇನೆ. ಶೃಂಗಸಭೆಯಲ್ಲಿ ಚರ್ಚೆಗಳು ಮತ್ತು ವಿವಿಧ ವಿಶ್ವ ನಾಯಕರೊಂದಿಗೆ ಫಲಪ್ರದ ಮಾತುಕತೆಗಳನ್ನು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.
ಅಲ್ಲದೆ, ವಿಮಾನ ನಿಲ್ದಾಣದಲ್ಲಿ ತಮ್ಮ ಸ್ವಾಗತದ ಫೋಟೋಗಳನ್ನು ಮೋದಿಯವರು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಸಂಭ್ರಮದಿಂದ ಸ್ವಾಗತಿಸುತ್ತಿರುವುದು, ಭಾರತದ ತ್ರಿವರ್ಣ ಧ್ವಜ ಹಾಗೂ ಪ್ರಧಾನಿ ಮೋದಿಯವರ ಫೋಟೋಗಳನ್ನು ಹಿಡಿದಿರುವುದು ಕಂಡು ಬಂದಿದೆ.