ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದಲ್ಲಿ ತುಂಬಿಸಲಾದ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು.ಬಳಿಕ ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನೀರಿನಲ್ಲಿ ನಡೆಯಿತು.
ಶ್ರೀ ದೇವಳದ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ, ತಾನು ಸಂಭ್ರಮ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಹೆಚ್ಚಿನ ಸಂತಸವನ್ನು ನೀಡಿತು.
ಶ್ರೀ ದೇವಳದ ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಚಿಣ್ಣರು ಪಟ್ಟರು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದವರಿಗೆ ನೀರನ್ನು ಹಾರಿಸಿ ಪುಟಾಣಿಗಳು ಸಂತಸಪಟ್ಟರು. ಮಕ್ಕಳೊಂದಿಗೆ ಹಿರಿಯರು ಕೂಡಾ ನೀರಾಟವಾಡಿ ಸಂಭ್ರಮಿಸಿದರು.