ಹೊಸದಿಗಂತ ವರದಿ ರಾಯಚೂರು :
ಖೋಟಾ ನೋಟು ಮುದ್ರಣಕ್ಕೆ ಮುಂದಾಗಿದ್ದ ಜಾಲದಲ್ಲಿ ಸಶಸ್ತ್ರ ಮೀಸಲು ಪಡೆ ಎಎಸ್‌ಐ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪಶ್ಚಿಮ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಖೋಟಾ ನೋಟು ಜಾಲದ ಮಾಸ್ಟರ್ ಮೈಂಡ್ ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಮರಿಲಿಂಗ, ಸದ್ದಾಂ, ರಮೇಶ್ ಹಾಗೂ ಶಿವಲಿಂಗ ಎನ್ನುವವರೆ ಬಂಧಿತ ಆರೋಪಿತರಾಗಿದ್ದಾರೆ.
ಆರೋಪಿಗಳಲ್ಲಿ ಓರ್ವನಾದ ನಗರದ ಶಾಂತಿ ಕಾಲೋನಿಯ ಸದ್ದಾಂನ ಮನೆಯನ್ನು ಬಾಡಿಗೆ ಪಡೆದಿದ್ದ ಮರಿಲಿಂಗ ಅಲ್ಲಿಂದಲೇ ದಂಧೆ ನಡೆಸುತ್ತಿದ್ದ. ಈ ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ದಾಂ ನಿಂದ 10 ಲಕ್ಷ ಹಣ ಪಡೆದು 30 ಲಕ್ಷ ಖೋಟಾ ನೋಟು ನೀಡುವ ವ್ಯವಹಾರ ಕುದುರಿತ್ತು. ಮೊದಲ ಹಂತವಾಗಿ ಲಾರಿ ವ್ಯಾಪಾರಿ ಸದ್ದಾಂ 4 ಲಕ್ಷ ರೂಪಾಯಿ ನೀಡಿದ್ದ. ಹೈದ್ರಾಬಾದ್‌ನ ಕಿಂಗ್‌ಪಿನ್‌ವೊಬ್ಬನ ಅಣತಿಯಂತೆ ಎಎಸ್‌ಐ ಮರಿಲಿಂಗ ಟೀಂ ಡೀಲ್ ಮಾಡುತ್ತಿತ್ತು. ಇದರಂಗವಾಗಿ ಲಾರಿ ವ್ಯಾಪಾರಿಗಳಾಗಿದ್ದ ಸದ್ದಾಂ ಹಾಗೂ ರಮೇಶ್ ಜೊತೆ ಡೀಲಿಂಗ್ ಮಾಡಿಕೊಳ್ಳಲಾಗಿತ್ತು. ಖೋಟಾ ನೋಟು ತಯಾರಿಕೆಗೆ ಬೇಕಾಗುವ ವೈಟ್ ಪೇಪರ್‌ಗಳು ಕೆಲ ಕಚ್ಚಾ ವಸ್ತುಗಳನ್ನು ಹೈದರಾಬಾದಿನ ಮೇನ್ ಗ್ಯಾಂಗ್ ನೀಡಿತ್ತು.
ಸದ್ದಾಂ ಮನೆಯನ್ನ ಬಾಡಿಗೆ ಪಡೆದು ಅಲ್ಲೇ ಖೋಟಾ ನೋಟು ತಯಾರಿಕೆಗೆ ಸಿದ್ಧತೆ ನಡೆಸಲಾಗಿತ್ತು. ಈ ವೇಳೆ ದಾಳಿ ನಡೆಸಿದ್ದ ಪೊಲೀಸರು ಆರೋಪಿತರಿಂದ ವೈಟ್ ಪೇಪರ್ ಹಾಗೂ ಕಚ್ಚಾ ವಸ್ತುಗಳು, 4 ಲಕ್ಷರೂ ನಗದು ಹಣ ಜಪ್ತಿ ಮಾಡಿದ್ದಾರೆ. ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲೆಯಲ್ಲಿ ಕೋಟಾ ನೋಟು ಹಾವಳಿ ನಿರಂತರವಾಗಿದೆ ಈ ಕುರಿತು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡು ಖೋಟಾ ನೋಟು ಹಾವಳಿಯನ್ನು ನಿಲ್ಲಿಸುವುದಕ್ಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಖೋಟಾ ನೋಟು ಹಾವಳಿ ಅಧಿಕವಾಗಿದೆ ಎಂದು ಹೊಸದಿಗಂತ 2023 ನ.11ರ ಸಂಚಿಕೆಯಲ್ಲಿ200 ಮುಖ ಬೆಲೆಯ ಖೋಟಾ ನೋಟ್ ಚಲಾವಣೆ ಅಧಿಕಾವಾಗಿದೆ ಎಂದು ವರದಿಯನ್ನು ಪ್ರಕಟಿಸಿತ್ತು.