ಹೊಸದಿಗಂತ ವರದಿ ಬೆಂಗಳೂರು:
ಹಾವೇರಿ ಜಿಲ್ಲೆ ಹಾನಗಲ್ ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಎಎಸ್ ಐಗೆ ವಹಿಸುವಂತೆ ಜನವರಿ 20 ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹಾವೇರಿಯಲ್ಲಿ ನೈತಿಕ ಪೊಲಿಸ್ ಗಿರಿ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲಿಸರು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಹಾವೇರಿ ಎಸ್ಪಿ, ಹೊಮ್‌ಮಿನಿಸ್ಟರ್ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಆದರೆ, ಈಗ ಹಾನಗಲ್ ಪೊಲಿಸರನ್ನು ಅವರೇ ಅಮಾನತು ಮಾಡಿದ್ದಾರೆ. ಹೀಗಾಗಿ ಪೊಲಿಸರಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಸಿಎಂಗೆ ಮೋದಿ ಫೋಬಿಯಾ:
ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಫೋಬಿಯಾ ಇದೆ. ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೊದಿ ದಕ್ಷ ಆಡಳಿತ ನೀಡುತ್ತಿದ್ದಾರೆ. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮತ್ತೆ ಮೂರನೆ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲಾಗದೇ ಸಿದ್ದರಾಮಯ್ಯ ಅವರ ವಿರುದ್ದ ಅನಗತ್ಯ ಆರೋಪ ಮಾಡುತ್ತಾರೆ.
ಸಿಎಂ ಪುತ್ರ ಯತೀಂದ್ರ ಅವರೇ ಹೇಳಿರುವುದನ್ನು ಕೇಳಿದರೆ, ಕಾಂಗ್ರೆಸ್ ಹೆಚ್ಚು ಸೀಟು ಬಂದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದ್ದಾರೆ. ಕಡಿಮೆ ಸೀಟು ಬಂದರೆ ಸಿಎಂ ಸ್ಥಾನ ಹೋಗುವ ಆತಂಕ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮೋದಿ ಬಂದಾಗೊಮ್ಮೆ ಸುಳ್ಳು ದಾಖಲೆಗಳನ್ನು ನೀಡಿ ಜನರ ದಾರಿ ತಪ್ಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ನಮ್ಮ ಐಟಿ ಸೆಲ್ ಹುಡುಗರ ಜೊತೆ ಚರ್ಚಿಸಲಿ:
ಕೇಂದ್ರದ ಅನುದಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆಗೆ ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಬೊಮ್ಮಾಯಿ, ಸಿಎಂಗೆ ಪ್ರಧಾನಿ ಜೊತೆ ಮಾಡಲು ಆಗಲ್ಲ ಅನ್ನುವುದು ಗೊತ್ತಿದೆ. ಅವರು ಮೊದಲು ನಮ್ಮ ಐಟಿ ಸೆಲ್ ಹುಡುಗರ ಜೊತೆ ಚರ್ಚೆ ಮಾಡಲಿ. ನಮ್ಮ ಐಟಿ ಸೆಲ್ ಹುಡುಗರು ಎಲ್ಲ ಮಾಹಿತಿ ಇಟ್ಟುಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಇನ್ನು ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಮತ್ತೆ ಪ್ರಯತ್ನ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಅವಧಿಯಲ್ಲಿಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಅದರಲ್ಲಿ ಅವೈಜ್ಞಾನಿಕ ಏನಿದೆ ಎಂದು ಪ್ರಶ್ನಿಸಿದರು.