ಹೊಸದಿಗಂತ ಮಂಗಳೂರು:
ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಉಡುಪಿ-ಮಣಿಪಾಲ ನಡುವಿನ ರಸ್ತೆಯಲ್ಲಿ ಎರಡು ತಂಡಗಳ ನಡುವೆ ರಾತ್ರಿ ವೇಳೆ ನಡೆದ ಗ್ಯಾಂಗ್‌ವಾರ್‌ನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬೆನ್ನಿಗೇ ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಈ ಘಟನೆ ಮೇ 18 ರಂದು ನಡೆದಿದೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಕಾಪು ಮೂಲದ ಎರಡು ತಂಡ ಕಾರುಗಳಲ್ಲಿ ಬಂದು ಚಕಮಕಿಗೆ ಮುಂದಾಗಿ ಬಳಿಕ ಕಾರುಗಳ ಮೂಲಕವೇ ಡಿಕ್ಕಿ ಹೊಡೆಸಿಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ.
ವಿಡಿಯೋಗಳನ್ನು ಪರಿಶೀಲಿಸಲಾಗಿದೆ. ಘಟನೆ ನಡೆದ ದಿನ ಲಭ್ಯ ಮಾಹಿತಿಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೆ ವೀಡಿಯೊ ದೃಶ್ಯಾವಳಿ ಆಧರಿಸಿ ಹೆಚ್ಚುವರಿ ಸೆಕ್ಷನ್ ಗಳನ್ನು ಸೇರಿಸಲಾಗುತ್ತದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಕಾರು, ಎರಡು ಬೈಕ್, ಒಂದು ತಲ್ವಾರ್ ಮತ್ತು ಒಂದು ಡ್ರ್ಯಾಗರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಹೇಳಿದ್ದಾರೆ