ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ಬೆಂಗಳೂರಿಗೆ 8 ಕೆಜಿ ಉತ್ತಮ ಗುಣಮಟ್ಟದ ಹೈಡ್ರೋಪೋನಿಕ್ ಗಾಂಜಾವನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ವಿಫಲಗೊಳಿಸಿದೆ. ಪ್ರತ್ಯೇಕ ವಿಮಾನಗಳ ಮೂಲಕ ಬ್ಯಾಂಕಾಕ್‌ನಿಂದ ಬಂದ ಇಬ್ಬರು ಪ್ರಯಾಣಿಕರಿಂದ ಸುಮಾರು 80 ಲಕ್ಷ ರೂ.ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.
ಹೈಡ್ರೋಪೋನಿಕ್ ಗಾಂಜಾವನ್ನು ಲ್ಯಾಬ್‌ಗಳ ಒಳಗೆ ನೀರಿನ ಮೇಲೆ ಪೋಷಕಾಂಶಗಳನ್ನು ಸೇರಿಸಿ ಬೆಳೆಯಲಾಗುತ್ತದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಮೂರು ವಾರಗಳಲ್ಲಿ ಈ ರೀತಿಯ ಮಾದಕ ವಸ್ತುವನ್ನು ವಶಪಡಿಸಿಕೊಂಡ ಎರಡನೇ ಪ್ರಕರಣ ಇದಾಗಿದೆ.
ಇಬ್ಬರೂ ಕ್ರಮವಾಗಿ ಡಿಸೆಂಬರ್ 19 ಮತ್ತು ಡಿಸೆಂಬರ್ 20 ರಂದು ಥೈಲ್ಯಾಂಡ್‌ನಿಂದ ಕೆಐಎಯ ಟರ್ಮಿನಲ್ 2 ತಲುಪಿದರು. ಪ್ರಯಾಣಿಕರ ಪ್ರೊಫೈಲಿಂಗ್ ಆಧರಿಸಿ, ನಾವು ಅವರನ್ನು ನಿಲ್ಲಿಸಿದ್ದೇವೆ. ಅವರು 20 ದಿನಗಳ ಹಿಂದೆ ಬ್ಯಾಂಕಾಕ್‌ಗೆ ಹೋಗಿ ಮನೆಗೆ ಮರಳುತ್ತಿದ್ದರು ಎಂದು ಅವರ ಪಾಸ್‌ಪೋರ್ಟ್ ಬಹಿರಂಗಪಡಿಸಿದೆ. ಪ್ರವಾಸಿಗರಂತೆ ನಟಿಸಿ ಏನನ್ನಾದರೂ ಕಳ್ಳಸಾಗಣೆ ಮಾಡಲು ಬಯಸುವವರು ಅಳವಡಿಸಿಕೊಳ್ಳುವ ವಿಧಾನ ಇದಾಗಿದೆ.
ಇವರಿಬ್ಬರು ಮಧ್ಯವಯಸ್ಕರು ಮತ್ತು ಭಾರತದ ನಿವಾಸಿಗರಾಗಿದ್ದಾರೆ. ಒಬ್ಬ ಪ್ರಯಾಣಿಕರು ಗಾಂಜಾವನ್ನು ತನ್ನ ಟ್ರಾಲಿ ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟಿದ್ದರೆ, ಇನ್ನೊಬ್ಬ ತನ್ನ ಬ್ಯಾಗ್‌ನಲ್ಲಿ ಸಾಗಿಸುತ್ತಿದ್ದ ತಿಂಡಿಗಳ ಪ್ಯಾಕೆಟ್‌ಗಳೊಳಗೆ ಅವುಗಳನ್ನು ಬಚ್ಚಿಟ್ಟಿದ್ದನು.