ಹೊಸದಿಗಂತ ವರದಿ,ದಾವಣಗೆರೆ:
ನಗರದ ಎಸ್.ಓ.ಜಿ ಕಾಲೋನಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ಐವರ ಪೈಕಿ ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಡುಗೆ ಮಾಡಲು ಮಂಗಳವಾರ ರಾತ್ರಿ ಗ್ಯಾಸ್ ಹೊತ್ತಿಸಿದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡು ಮಲ್ಲೇಶಪ್ಪ(60), ಲಲಿತಮ್ಮ(50), ಪಾರ್ವತಮ್ಮ(45), ಸೌಭಾಗ್ಯ(36) ಪ್ರವೀಣ್(35) ಗಾಯಗೊಂಡಿದ್ದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆಂದು ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಾಯಾಳುಗಳ ಪೈಕಿ ಶೇ.50ಕ್ಕಿಂತ ಹೆಚ್ಚು ಗಾಯವಾಗಿದ್ದ ಪಾರ್ವತಮ್ಮ ಸಾವಿಗೀಡಾಗಿದ್ದಾರೆ.
ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಮನೆಯ ಮೇಲ್ಛಾವಣಿಯೇ ಕಿತ್ತು ಹೋಗಿತ್ತು. ಸದ್ಯ ಸೌಭಾಗ್ಯ, ಲಲಿತಮ್ಮ, ಮಲ್ಲೇಶಪ್ಪ, ಪ್ರವೀಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.