ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಳಿ ಮೇಲೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಮತ್ತೊಂದು ದುಷ್ಕೃತ್ಯಕ್ಕೆ ಸಂಚು ಬೆಳಕಿಗೆ ಬಂದಿದೆ.
ಕಾನ್ಪುರದಲ್ಲಿ ರೈಲ್ವೆ ಹಳಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿರುವ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಪುಷ್ಪಕ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ಟ್ರ್ಯಾಕ್‌ನಲ್ಲಿ ಕೆಂಪು ಸಿಲಿಂಡರ್ ಬಿದ್ದಿರುವುದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿ ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ರೈಲ್ವೇ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಮತ್ತು ಸಿಮೆಂಟ್ ಬ್ರಿಕ್ಸ್‌ಗಳನ್ನಿರಿಸಿ ರೈಲು ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಘಟನೆ ಬೆಳಿಕಿಗೆ ಬಂದಿತ್ತು. ಇದಾದ 20 ದಿನಗಳ ಬಳಿಕ ಅಂತಹದ್ದೇ ಮತ್ತೊಂಧು ಘಟನೆ ನಡೆದಿದೆ.
ಮುಂಬೈನಿಂದ ಲಕ್ನೋಗೆ ಹೋಗುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ಹೋಲ್ಡಿಂಗ್ ಲೈನ್‌ಗೆ ತಲುಪಿತ್ತು. ಈ ವೇಳೆ ಸಂಜೆ 4.15ರ ಸುಮಾರಿಗೆ ಹಳಿಗಳ ಮೇಲೆ ಅಗ್ನಿ ಸುರಕ್ಷತಾ ಸಿಲಿಂಡರ್ ಬಿದ್ದಿರುವುದನ್ನು ಕಂಡ ಚಾಲಕ ಆಘಾತಕ್ಕೊಳಗಾಗಿದ್ದಾನೆ. ರೈಲಿನ ವೇಗವು ನಿಧಾನವಾಗಿದ್ದ ಕಾರಣ ತಕ್ಷಣವೇ ಬ್ರೇಕ್ ಹಾಕಿ, ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ. ಬಳಿಕ ನಿಯಂತ್ರಣ ಕೊಠಡಿಗೆ ತಿಳಿಸಿದ ನಂತರ ಚಾಲಕ ಸಿಲಿಂಡರ್ ಅನ್ನು ಕಾನ್ಪುರ ಸೆಂಟ್ರಲ್‌ಗೆ ತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.