Sunday, December 10, 2023

Latest Posts

ಗೆದ್ದರೆ 400 ಗೆ ಗ್ಯಾಸ್, ಪ್ರತಿ ಮಹಿಳೆಗೆ 3 ಸಾವಿರ ರೂ: ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ ತೆಲಂಗಾಣ ಸಿಎಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೆದ್ದರೆ 400 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್​​, ಪ್ರತಿ ಮಹಿಳೆಗೆ 3 ಸಾವಿರ ರೂ, ಬಿಪಿಎಲ್​ ಕುಟುಂಬಕ್ಕೆ 5 ಲಕ್ಷದ ವಿಮೆ, ಇದು ಮತಪ್ರಭುಗಳಿಗೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಯಿಂದ ಭರವಸೆ.

ಮುಂದಿನ ತಿಂಗಳು ನಡೆಯುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಹಂಬಲದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ,

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಕಳೆದ ವಾರ ಕಾಂಗ್ರೆಸ್​ ಘೋಷಿಸಿದ ಭರವಸೆಗಳನ್ನು ಮೀರಿಸುವ ಆಶ್ವಾಸನೆಗಳನ್ನು ಪ್ರಕಟಿಸಿದರು.

ಸೌಭಾಗ್ಯ ಲಕ್ಷ್ಮಿ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಮಹಿಳೆಯರಿಗೆ ಮಾಸಿಕ 3 ಸಾವಿರ ರೂಪಾಯಿ ಆರ್ಥಿಕ ನೆರವು, 400 ರೂ.ಗೆ ಅಡುಗೆ ಅನಿಲ ಸಿಲಿಂಡರ್, ಆಸರೆ ಪಿಂಚಣಿ ಯೋಜನೆಯಡಿ ವಿವಿಧ ವರ್ಗದ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಪಿಂಚಣಿ ಹೆಚ್ಚಿಸಲಾಗುವುದು ಎಂದು ಹೇಳಿದೆ.

2024 ರ ಮಾರ್ಚ್ ನಂತರ ಪಿಂಚಣಿ ಮೊತ್ತವನ್ನು ಪ್ರಸ್ತುತ ಇರುವ 2016 ರೂಪಾಯಿಯಿಂದ 3,016 ರೂ.ಗೆ ಹೆಚ್ಚಳ, ಜೊತೆಗೆ ಪ್ರತಿ ವರ್ಷವೂ ಏರಿಕೆ ಮಾಡುತ್ತಾ ಐದು ವರ್ಷದೊಳಗೆ ಅದನ್ನು 5,000 ರೂ.ಗೆ ಏರಿಸಲಾಗುವುದು ಎಂದಿದೆ.

ದೈಹಿಕ ವಿಶೇಷಚೇತನರಿಗೆ ಮುಂದಿನ ಐದು ವರ್ಷಗಳಲ್ಲಿ ಪಿಂಚಣಿಯನ್ನು ಸದ್ಯ ಇರುವ 4,016 ರಿಂದ ರೂ 6,016 ಕ್ಕೆ ಹೆಚ್ಚಳ. ಪ್ರತಿ ವರ್ಷ 300 ರೂ.ನಂತೆ ಏರಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ 93 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲು ‘ಕೆಸಿಆರ್ ವಿಮಾ’ ಯೋಜನೆ ಜಾರಿ ಮಾಡಲಾಗುವುದು. ಅದರಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ವಿಮೆ ನೀಡಲಾಗುವುದು. ಸರ್ಕಾರವೇ ಎಲ್‌ಐಸಿ 3,600 ರಿಂದ 4,000 ರೂ ಪ್ರೀಮಿಯಂ ಪಾವತಿಸುತ್ತದೆ ಎಂದು ಭರವಸೆಯಲ್ಲಿದೆ.

ಪ್ರಣಾಳಿಕೆಯಲ್ಲಿರುವ ಆಶ್ವಾಸನೆಗಳಿವು:

ರೈತು ಬಂಧು ಯೋಜನೆಯಡಿ ರೈತರಿಗೆ ವರ್ಷಕ್ಕೆ 10 ಸಾವಿರದಿಂದ 15 ಸಾವಿರ ರೂಪಾಯಿ ನೆರವು. ಮೊದಲ ವರ್ಷವೇ ಈ ಮೊತ್ತ 12 ಸಾವಿರಕ್ಕೆ ಹೆಚ್ಚಳ
ಆರೋಗ್ಯಶ್ರೀ ಆರೋಗ್ಯ ವಿಮಾ ಯೋಜನೆಯು 5 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ
ಬಿಪಿಎಲ್ ಕುಟುಂಬಗಳಿಗೆ ಪಡಿತರ ಅಂಗಡಿಗಳ ಮೂಲಕ ಉತ್ತಮ ಅಕ್ಕಿ ಪೂರೈಕೆ
ವಸತಿ ರಹಿತ ಬಡವರಿಗೆ ಮನೆ ನಿವೇಶನ
ಮೇಲ್ಜಾತಿಯ ಬಡವರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಸತಿ ಶಾಲೆ ಸ್ಥಾಪನೆ
ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ನೀತಿ ಮರುಜಾರಿಗೆ ಅಧಿಕಾರಿಗಳ ಸಮಿತಿ ರಚನೆ
ಅನಾಥ ಮಕ್ಕಳಿಗಾಗಿ ವಿಶೇಷ ನೀತಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!