ಅಮೆರಿಕದಿಂದ ಅಕ್ರಮ ವಲಸಿಗರಿಗೆ ಗೇಟ್ ಪಾಸ್: ಗಡಿಪಾರು ಹೊಸದಲ್ಲ ಎಂದು ಸಂಸತ್ ನಲ್ಲಿ ವಿವರಣೆಕೊಟ್ಟ ಜೈಶಂಕರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ವಲಸಿಗರನ್ನು ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಹೊಸದಲ್ಲ ಮತ್ತು ಎಲ್ಲಾ ದೇಶಗಳು ತಮ್ಮ ಪ್ರಜೆಗಳು ವಿದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

ಭಾರತಕ್ಕೆ ಗಡೀಪಾರುಗೊಂಡಿರುವ ಅಕ್ರಮ ವಲಸಿಗರನ್ನು ಸರಿಯಾದ ರೀತಿಯಲ್ಲಿ ಭಾರತಕ್ಕೆ ಕರೆಸಿಕೊಳ್ಳಲಾಗುವುದು ಎಂದು ಜೈಶಂಕರ್​​ ರಾಜ್ಯಸಭೆಯಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಅಮೆರಿಕಾದಲ್ಲಿ ವಾಸವಾಗಿದ್ದ 104 ಅಕ್ರಮ ವಲಸಿಗರನ್ನು ನಿನ್ನೇ ಭಾರತಕ್ಕೆ ಅಕ್ರಮವಾಗಿ ಗಡೀಪಾರು ಮಾಡಿದ ರೀತಿಯ ಕುರಿತು ದೇಶದಾದ್ಯಂತ ಗಂಭೀರ ರಾಜಕೀಯ ಪ್ರೇರಿತ ಪ್ರತಿಭಟನೆಗಳ ನಡುವೆ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ “ಕೈಕೋಳ” ಧರಿಸಿ ಪ್ರತಿಭಟಿಸಿದರು. ಇದಾದ ನಂತರ ಸ್ಪಷ್ಟನೆ ನೀಡಿರುವ ಜೈಶಂಕರ್ ಅವರು, ಭಾರತವು ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ. ಗಡೀಪಾರಾಗಿ ಹಿಂದಿರುಗುತ್ತಿರುವ ಜನರನ್ನು ಯಾವುದೇ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳುವುದು ಎಂದು ಭರವಸೆ ನೀಡಿದರು.

ಇದೇ ವೇಳೆ 2009 ರಿಂದಲೂ ಅಮೆರಿಕದಿಂದ ಗಡೀಪಾರಾದ ಅಕ್ರಮ ವಲಸಿಗರು ಮಾಹಿತಿಯನ್ನು ಹಂಚಿಕೊಂಡರು.

ಗಡೀಪಾರುಗೊಂಡ ಪುರುಷರನ್ನು ಮಾತ್ರವೇ ಕೈಕೋಳ ಮತ್ತು ಸರಪಳಿಯಲ್ಲಿ ಬಂಧಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳನ್ನು ಯಾವುದೇ ರೀತಿಯಲ್ಲಿ ನಿರ್ಬಂಧಿಸಲಾಗಿಲ್ಲ ಎಂದು ದೃಢಪಡಿಸಿದರು. ಇನ್ನು 10 ಗಂಟೆಗಳ ಹಾರಾಟದ ಸಮಯದಲ್ಲಿ ಗಡೀಪಾರು ಮಾಡಿದವರಿಗೆ ಆಹಾರ ಮತ್ತು ಔಷಧವನ್ನು ನೀಡಲಾಯಿತು ಎಂದು ಸಚಿವರು ಹೇಳಿದರು.

104 ಭಾರತೀಯ ಪ್ರಜೆಗಳ ಗಡೀಪಾರು ವಿರುದ್ಧ ವಿರೋಧ ಪಕ್ಷದ ಸಂಸದರು ನಡೆಸಿದ ಪ್ರತಿಭಟನೆಯಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಲಾಪಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಜೈಶಂಕರ್ ಅವರಿಂದ ಹೇಳಿಕೆ ಹೊರಬಿದ್ದಿದೆ.

ಇನ್ನು ಲೋಕಸಭೆಯಲ್ಲಿ, ಸ್ಪೀಕರ್ ಓಂ ಬಿರ್ಲಾ ಅವರು, ಯೋಜಿತ ಅಡ್ಡಿಗಳಿಗೆ ಆಶ್ರಯಿಸಬೇಡಿ, ಇದು ಬೇರೆ ದೇಶಕ್ಕೆ ಸಂಬಂಧಿಸಿದ ವಿಷಯಗಿದ್ದು, ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ಮನವಿ ಮಾಡಿದ್ದರೂ ಸಹ, ವಿರೋಧ ಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಕೈಗೆ ಕೋಳ ಧರಿಸಿ, ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!