ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಕ್ರಿಕೆಟ್ ತಂಡದ ಮುಂದಿನ ಮುಖ್ಯ ಕೋಚ್ ಆಗುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೋಮವಾರ ಮುಗಿದಿದೆ.
ಇತ್ತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಭಾರತ ತಂಡಕ್ಕೆ ಗೌತಮ್ ಗಂಭೀರ್ ಹೆಡ್ ಕೋಚ್ ಆಗಲಿದ್ದಾರೆಂದು ಕ್ರಿಕ್ಬಝ್ ವರದಿ ಮಾಡಿದೆ.
ಟೀಮ್ ಇಂಡಿಯಾ ಹೆಡ್ ಕೋಚ್ ಸಂಬಂಧ ಗೌತಮ್ ಗಂಭೀರ್ ಹಾಗೂ ಬಿಸಿಸಿಐ ನಡುವೆ ಒಪ್ಪಂದ ಆಗಿದೆ ಎಂದು ಐಪಿಎಲ್ ಫ್ರಾಂಚೈಸಿ ಮಾಲೀಕರೊಬ್ಬರು ಕ್ರಿಕ್ಬಝ್ಗೆ ತಿಳಿಸಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ವರದಿಯಾಗಿದೆ.
“ಐಪಿಎಲ್ ಫ್ರಾಂಚೈಸಿಯ ಅಗ್ರ ದರ್ಜೆಯ ಮಾಲೀಕರೊಬ್ಬರು ಬಿಸಿಸಿಐ ಅಧಿಕಾರಿಗಳೊಂದಿಗೆ ಆತ್ಮೀಯರಾಗಿದ್ದಾರೆ. ಭಾರತ ತಂಡಕ್ಕೆ ಹೆಡ್ ಕೋಚ್ ಆಗುವ ಸಂಬಂಧ ಬಿಸಿಸಿಐ ಹಾಗೂ ಗೌತಮ್ ಗಂಭೀರ್ ನಡುವೆ ಒಪ್ಪಂದವಾಗಿದೆ. ಇನ್ನೇನು ಅಧಿಕೃತವಾಗಿ ಪ್ರಕಟಿಸುವುದು ಮಾತ್ರ ಬಾಕಿ ಇದೆ ಎಂದು ಐಪಿಎಲ್ ಮಾಲೀಕರುವ ತಿಳಿಸಿದ್ದಾರೆ, ಎಂದು ಕ್ರಿಕ್ಬಝ್ ವರದಿ ಮಾಡಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮೆಂಟರ್ ಆಗಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿದೆ.
2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡಕ್ಕೆ ಗೌತಮ್ ಗಂಭೀರ್ ಮೆಂಟರ್ ಆಗಿ ಬಂದ ಬಳಿಕ ಕೋಲ್ಕತಾ ಫ್ರಾಂಚೈಸಿಯ ಅದೃಷ್ಟ ಬದಲಾಗಿದೆ. ಲೀಗ್ ಹಂತದಲ್ಲಿ ಅಗ್ರ ಸ್ಥಾನ ಪಡೆದಿದ್ದ ಕೆಕೆಆರ್, ಪ್ಲೇಆಫ್ಸ್ ಹಂತದಲ್ಲಿ ಎರಡು ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಮೂರನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಗಂಭೀರ್ ನಾಯಕತ್ವದಲ್ಲಿ ಎರಡು ಬಾರಿ ಚಾಂಪಿಯನ್
ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 2012 ಹಾಗೂ 2014ರಲ್ಲಿ ಎರಡು ಬಾರಿ ಚಾಂಪಿಯನ್ ಆಗಿತ್ತು. ಇದೀಗ 2024ರ ಐಪಿಎಲ್ ಟೂರ್ನಿಯಲ್ಲಿಯೂ ಕೆಕೆಆರ್ ಯಶಸ್ಸಿನಲ್ಲಿ ಗಂಭೀರ್ ನೆರವು ನೀಡಿದ್ದಾರೆ. ಲೀಗ್ ಹಂತದಲ್ಲಿ ಕೋಲ್ಕತಾ ಫ್ರಾಂಚೈಸಿ 20 ಅಂಕಗಳನ್ನು ಕಲೆ ಹಾಕಿತ್ತು.
ಟೀಮ್ ಇಂಡಿಯಾಗೆ ಗೌತಮ್ ಗಂಭೀರ್ ಅವರು ಹೆಡ್ ಕೋಚ್ ಆಗಿ ನೇಮಕಗೊಂಡರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುವ ಎರಡು ತಿಂಗಳ ವಿರಾಮದಲ್ಲಿ ಕುಟುಂಬದ ಜೊತೆ ಸಮಯ ಕಳೆಯುವುದು ತುಂಬಾ ಮುಖ್ಯವಾಗುತ್ತದೆ. ಏಕೆಂದರೆ ಟೀಮ್ ಇಂಡಿಯಾ ಕೋಚ್ ಆಗಿ ನೇಮಕಗೊಂಡರೆ ಅವರಿಗೆ ಬಿಡುವಿಲ್ಲದೆ ವೇಳಾಪಟ್ಟಿ ಇರುತ್ತದೆ.