ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆ ನಡೆಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಮಹತ್ವದ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 17ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಜಿಬಿಎ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅರ್ಜಿಯನ್ನು ತುರ್ತಾಗಿ ಉಲ್ಲೇಖಿಸಿದ್ದು, ಕೋರ್ಟ್ ಶುಕ್ರವಾರವೇ ಇದರ ವಿಚಾರಣೆ ನಡೆಸಲು ಸಮ್ಮತಿಸಿದೆ.
ಚುನಾವಣೆ ಮುಂದೂಡಿಕೆಗೆ ಸರ್ಕಾರ ನೀಡುತ್ತಿರುವ ಕಾರಣಗಳೇನು?
ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ ಜಂಟಿಯಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಅಸಾಧ್ಯ ಎಂದು ವಾದಿಸಿದೆ. ಪ್ರಸ್ತುತ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದ್ದು, ಆಡಳಿತಾತ್ಮಕವಾಗಿ ದೊಡ್ಡ ಸವಾಲುಗಳು ಎದುರಾಗಿವೆ.
ಮನೆಮನೆಗೆ ತೆರಳಿ ಮತದಾರರ ವಿವರ ಪರಿಶೀಲಿಸುವ ಕಾರ್ಯದಲ್ಲಿ ಈಗಾಗಲೇ ಶಾಲಾ ಶಿಕ್ಷಕರು ಹಾಗೂ ಸರ್ಕಾರಿ ಸಿಬ್ಬಂದಿ ನಿರತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ಭಾರೀ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸುವುದು ಸಾಧ್ಯವಾಗುತ್ತಿಲ್ಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಸುಮಾರು 1.03 ಕೋಟಿ ಮತದಾರರು ಹಾಗೂ 40 ಲಕ್ಷ ಮನೆಗಳಿದ್ದು, ಪ್ರಕ್ರಿಯೆ ಅತ್ಯಂತ ಸಂಕೀರ್ಣವಾಗಿದೆ.
ಇನ್ನೂ, ಜಿಬಿಎ ಅಡಿಯಲ್ಲಿ ಬರುವ ಐದು ನಗರ ಪಾಲಿಕೆಗಳ ಚುನಾವಣೆಗೆ ಮತದಾನದ ದಿನದಂದು ಕೇವಲ ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿಯೇ ಸುಮಾರು 60,000 ಚುನಾವಣಾ ಸಿಬ್ಬಂದಿಯ ಅಗತ್ಯವಿದೆ ಎಂದು ತಿಳಿಸಿದೆ.
ಇದನ್ನೂ ಓದಿ:
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಬೃಹತ್ ಪ್ರಮಾಣದ ಸಿಬ್ಬಂದಿ ನಿಯೋಜನೆಯ ಸವಾಲುಗಳನ್ನು ಮುಂದಿಟ್ಟುಕೊಂಡು ಡಿ.31ರವರೆಗೆ ಕಾಲಾವಕಾಶ ಕೋರಿರುವ ರಾಜ್ಯ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲಿದೆಯೇ ಅಥವಾ ನಿಗದಿತ ಸಮಯದಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಲಿದೆಯೇ ಎಂಬುದು ಜುಲೈ 17ರ ಶುಕ್ರವಾರದ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.



