ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಕೇಳಿದಾಗ ಗೂಗಲ್ ಎಐ (Google’s AI) ವೇದಿಕೆ ಜೆಮಿನಿ (Gemini) ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದಕ್ಕೆ ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿತ್ತು.
ಇದರ ಬೆನ್ನಲ್ಲೇ ಗೂಗಲ್ ಸ್ಪಷ್ಟನೆ ನೀಡಿದ್ದು,, ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಚಾಟ್‌ಬಾಟ್ ಯಾವಾಗಲೂ ಪ್ರಸ್ತುತ ಘಟನೆಗಳು ಮತ್ತು ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿಶ್ವಾಸಾರ್ಹ ಉತ್ತರಗಳನ್ನು ನೀಡುವುದಿಲ್ಲ ಎಂದು ಹೇಳಿದೆ.
ಇಮೇಲ್ ಹೇಳಿಕೆಯಲ್ಲಿ, Google ವಕ್ತಾರರು ಸ್ಪಷ್ಟನೆ ನೀಡಿದ್ದು,ಈ ಸಮಸ್ಯೆಯನ್ನು ಪರಿಹರಿಸಲು ನಾವು ತ್ವರಿತವಾಗಿ ಕೆಲಸ ಮಾಡಿದ್ದೇವೆ. ಜೆಮಿನಿಯನ್ನು ಸೃಜನಶೀಲತೆ ಮತ್ತು ಉತ್ಪಾದಕತೆಯ ಸಾಧನವಾಗಿ ನಿರ್ಮಿಸಲಾಗಿದೆ. ಅದು ಯಾವಾಗಲೂ ವಿಶ್ವಾಸಾರ್ಹವಾಗಿರುವುದಿಲ್ಲ, ವಿಶೇಷವಾಗಿ ಪ್ರಸ್ತುತ ಘಟನೆಗಳು, ರಾಜಕೀಯ ವಿಷಯಗಳು ಅಥವಾ ಅಪ್ಡೇಟ್ ಆಗುವ ಸುದ್ದಿಗಳ ಕುರಿತು ಪ್ರತಿಕ್ರಿಯಿಸುವಾಗ ಎಲ್ಲವೂ ಸರಿಯಾಗಿರಬೇಕೆಂದೇನಿಲ್ಲ ಎಂದು ಹೇಳಿದ್ದಾರೆ.
ಇತ್ತ AI ನ ಪ್ರತಿಕ್ರಿಯೆಯು ಐಟಿ ನಿಯಮಗಳು ಮತ್ತು ಕೆಲವು ಕ್ರಿಮಿನಲ್ ಕೋಡ್ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಎಕ್ಸ್‌ನಲ್ಲಿ ಪಿಎಂ ಮೋದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಜೆಮಿನಿಯ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್‌ಗಳನ್ನು ಬಳಕೆದಾರರು ಹಂಚಿಕೊಂಡ ನಂತರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದ್ದರು. ಎಐನ ಪ್ರತಿಕ್ರಿಯೆಯು ಐಟಿ ನಿಯಮಗಳು ಮತ್ತು ಕೆಲವು ಕ್ರಿಮಿನಲ್ ಕೋಡ್ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಚಂದ್ರಶೇಖರ್ ಹೇಳಿದ್ದು, ತಮ್ಮ ಪೋಸ್ಟ್‌ನಲ್ಲಿ ಗೂಗಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ.