ಲೋಕಸಭೆ ಚುನಾವಣೆ: 100 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಗೆ ಬಿಜೆಪಿ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ (Lok Sabha Election 2024) ರಣಾಂಗಣ ಸಿದ್ಧವಾಗುತ್ತಿದೆ. ಬಿಜೆಪಿ, ಕಾಂಗ್ರೆಸ್‌ ಸೇರಿ ಸರ್ವ ಪಕ್ಷಗಳೂ ಚುನಾವಣೆಗೆ ರಣತಂತ್ರ ರೂಪಿಸುತ್ತಿವೆ. ಇಂಡಿಯಾ ಒಕ್ಕೂಟ ದೆಹಲಿ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಮುಂದಾಗಿದೆ.

ಇದರ ಬೆನ್ನಲ್ಲೇ, ಬಿಜೆಪಿಯು 100 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಕೇಂದ್ರೀಯ ಚುನಾವಣೆ ಸಮಿತಿ ಸಭೆಯು ಫೆಬ್ರವರಿ 29ರಂದು ಸಭೆ ನಡೆಸಲಿದ್ದು, ಅದೇ ದಿನ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಈಗಾಗಲೇ 100 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಫೆಬ್ರವರಿ 29ರಂದು ಪ್ರಕಟ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೆಸರುಗಳು ಕೂಡ ಪಟ್ಟಿಯಲ್ಲಿ ಇರಲಿವೆ. ಆದರೆ, ಯಾವ ಕ್ಷೇತ್ರ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಅವರು ವಾರಾಣಸಿ, ಅಮಿತ್‌ ಶಾ ಅವರು ಗಾಂಧಿನಗರದಿಂದಲೇ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮುಂದಿನ 100 ದಿನಗಳಲ್ಲಿ ಏನೇನು ಮಾಡಬೇಕು ಎಂಬುದರ ಕುರಿತು ಟಾಸ್ಕ್‌ ನೀಡಿದ್ದಾರೆ. ಅದರಲ್ಲೂ, ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತೆರಳಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಈ ಬಾರಿ ಬಿಜೆಪಿಯು 370 ಹಾಗೂ ಎನ್‌ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲಬೇಕು. ಅದಕ್ಕೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಅವಿರತವಾಗಿ ಶ್ರಮಿಸಬೇಕು ಎಂಬುದಾಗಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ಮಾರ್ಚ್‌ 13ರ ನಂತರವೇ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕೇಂದ್ರ ಚುನಾವಣಾ ಸಮಿತಿಯ ಅಧಿಕಾರಿಗಳು ಪ್ರಸ್ತುತ ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ವಿವಿಧ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನಲ್ಲಿದ್ದು, ನಂತರ ಅವರು ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ವಿವಿಧ ರಾಜ್ಯಗಳ ಭೇಟಿಯನ್ನು ಮಾರ್ಚ್ 13ರೊಳಗೇ ಮುಗಿಸಲು ಚುನಾವಣಾ ಆಯೋಗವು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!