ಹೊಸದಿಗಂತ ಡಿಜಿಟಲ್ ಡೆಸ್ಕ್
ನನ್ನನ್ನು ಜೈಲಿಗೆ ಹಾಕಲು ಎಲ್ಲರು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಏನೇನೋ ದೊಡ್ಡ ಸ್ಕೀಮು, ತಂತ್ರ, ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲವೂ ನಡೆಯಲಿ ಬಿಡಿ. ನನ್ನನ್ನು ಜೈಲಿಗೆ ಹಾಕಲು ಸಿದ್ಧತೆ ಮಾಡುತ್ತಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ ಎಂದು ತಿಳಿಸಿದರು.
ದಿನಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ. ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟ್ನರ್ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯೆ ನೀಡಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ. ಅವರ ತಂದೆಯವರು ಅನೇಕ ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆ ಎಂಬ ವಿಚಾರ ಕೇಳಿದೆ. ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಮಾಜಿ ಮುಖ್ಯಮಂತ್ರಿಗಳು. ಅವರುಗಳು ಇವರಂತೆ ಸುಮ್ಮ ಸುಮ್ಮನೆ ಮಾತನಾಡುತ್ತಾರಾ? ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಮಾತು, ವರ್ತನೆ ಎಂದರೆ ನಾವು ಹೆದರಿ ಗಡ, ಗಡ ನಡಗುವಂತೆ ಇರಬೇಕು ಎಂದು ಟೀಕಿಸಿದರು.