ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ಎರಡು ದಿನಗಳ ಜಾಗತಿಕ ಮೀನುಗಾರಿಕೆ ಸಮ್ಮೇಳನ ನಡೆಯಿತು. ಆ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್ ಅವರು ಘೊಲ್ ಮೀನನ್ನು ರಾಜ್ಯದ ಮೀನೆಂದು ಘೋಷಿಸಿದ್ದಾರೆ.
ಅರೆ, ಇದೇನಿದು? ದೇಶದ ವಿಷಯದಲ್ಲಿ ರಾಷ್ಟ್ರಪಕ್ಷಿ, ರಾಷ್ಟ್ರೀಯ ಪ್ರಾಣಿ ಇದ್ದಂತೆ ನಾಡಿನ ಮಟ್ಟದಲ್ಲೂ ಗುರುತಿನ ಗೌರವ ಪಡೆಯುತ್ತಿರುವ ಈ ಘೋಲ್ ಮೀನಿನ ವೈಶಿಷ್ಟ್ಯ ಏನೆಂದಿರಾ? ತಿನ್ನುವುದಕ್ಕಾಗಿ ಇದಕ್ಕಿರುವ ಬೇಡಿಕೆ ಒಂದು ಕಡೆಯಾದರೆ, ಇದರ ಶ್ವಾಸಕೋಶದ ಭಾಗವನ್ನು ಔಷಧ ತಯಾರಿಕೆಗೆ ಬಳಸುತ್ತಾರೆಂಬ ಕಾರಣಕ್ಕೆ ಘೊಲ್ ಮೀನಿಗೆ ಇಷ್ಟು ಪ್ರಾಮುಖ್ಯ. ಗುಜರಾತ್ ಮತ್ತು ಮಹಾರಾಷ್ಟ್ರದ ಕಡತ ತೀರಗಳಲ್ಲಿ ಮಾತ್ರ ಕಾಣುವ ಮೀನಿದು.
ಸಾಮಾನ್ಯವಾಗಿ ಒಂದೂವರೆ ಮೀಟರ್ ಉದ್ದವಿರುವ ಘೊಲ್ ಮೀನಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 5 ಲಕ್ಷ ರುಪಾಯಿಗಳು! ಹೀಗಾಗಿ ಘೊಲ್ ಮೀನನ್ನು ಹಿಡಿಯುವ ಮೀನುಗಾರನ ಭಾಗ್ಯವೇ ಬದಲಾಗುತ್ತದೆ.
ಗುಜರಾತಿನ ರೀತಿಯಲ್ಲೇ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳು ಸಹ ತಮ್ಮ ನಾಡ ಮೀನು ಯಾವುದೆಂದು ನಿರ್ದಿಷ್ಟಪಡಿಸಿವೆ.