ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಲಾಂ ನಬಿ ಆಜಾದ್ ಕಾಂಗ್ರೆಸ್ ಪಕ್ಷದೊಂದಿಗಿನ ದಶಕಗಳ ಕಾಲದ ಒಡನಾಟವನ್ನು ಮುರಿದು ಬೇರೆ ಪಕ್ಷ ಸ್ಥಾಪನೆ ಮಾಡಿದ ಬಳಿಕ ಕಾಂಗ್ರೆಸ್ ಪಕ್ಷದ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬ ಮಾತನ್ನು ಹೇಳಿದ್ದಾರೆ. ರಾಷ್ಟ್ರೀಯ ವಾಹಿನಿಯೊಂದರ ಜೊತೆ ಮಾತನಾಡುತ್ತಾ..ನಾನು ಕಾಂಗ್ರೆಸ್ ನಿಂದ ದೂರವಾಗಿದ್ದರೂ ಅವರ ಜಾತ್ಯಾತೀತತೆ ವಿರುದ್ಧ ಇಲ್ಲ. ಪಕ್ಷ ವ್ಯವಸ್ಥೆ ದುರ್ಬಲಗೊಂಡಿದ್ದರಿಂದ ನಾನು ಪಕ್ಷ ತೊರೆಯಬೇಕಾಯಿತು. ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಆಜಾದ್ ಹೇಳಿದರು.
ಕಾಂಗ್ರೆಸ್ ಪಕ್ಷವು ಎಲ್ಲಾ ಹಿಂದೂಗಳು, ಮುಸ್ಲಿಮರು, ರೈತರು ಮತ್ತು ಸಮಾಜದ ಎಲ್ಲಾ ವರ್ಗದ ಜನರನ್ನು ಬೆಂಬಲಿಸುತ್ತದೆ. ಆಮ್ ಆದ್ಮಿ ಪಕ್ಷ ಕೇವಲ ದೆಹಲಿಯ ಪಕ್ಷ ಎಂದು ಟೀಕಿಸಿದರು. ಪಂಜಾಬ್ ನಲ್ಲಿ ಪಕ್ಷ ಗೆದ್ದಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಉತ್ತಮ ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿದರು. ಮುಂಬರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್ ಮಾತ್ರ ಸಾಧ್ಯ. ಏಕೆಂದರೆ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಹೊಂದಿದೆ ಎಂದರು.
ಇದೇ ವೇಳೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದರು. ಈ ವಿಚಾರವನ್ನು ಹಲವು ಬಾರಿ ನಾನು ಪ್ರಸ್ತಾಪಿಸಿದ್ದು, ಕೇಂದ್ರ ಸರ್ಕಾರ ಈ ಕೆಲಸ ಮಾಡಿದರೆ, ಸ್ವಾಗತಾರ್ಹ ಎಂಬುದಾಗಿ ಗುಲಾಂ ನಬಿ ಆಜಾದ್ ಹೇಳಿದರು.