May 8, 2026
Friday, May 8, 2026
spot_img

ತುಂಗಭದ್ರಾ ನದಿ ದಡದಲ್ಲಿ ದೈತ್ಯ ಮೊಸಳೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಹೊಸದಿಗಂತ ದಾವಣಗೆರೆ:

ಜಿಲ್ಲೆಯ ಹೊನ್ನಾಳಿ ತಾಲೂಕಿನ ತುಂಗಭದ್ರಾ ನದಿ ತೀರದ ಜನರಲ್ಲಿ ಈಗ ಮೊಸಳೆಯ ಭೀತಿ ಆವರಿಸಿದೆ. ತಾಲೂಕಿನ ರಾಂಪುರ ಗ್ರಾಮದ ಸಮೀಪ ಹರಿಯುವ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

ನದಿ ನೀರಿನಿಂದ ಹೊರಬಂದ ಬೃಹತ್ ಮೊಸಳೆಯು ದಡದ ಮರಳಿನ ಮೇಲೆ ರಾಜಾರೋಷವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿರುವ ದೃಶ್ಯವನ್ನು ಸ್ಥಳೀಯ ಗ್ರಾಮಸ್ಥರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಮೊಸಳೆಯ ದೈತ್ಯ ರೂಪ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಮೊಸಳೆ ಸಾಗುವ ಹಾದಿಯನ್ನು ಗಮನಿಸಿದರೆ, ಅದು ಕೇವಲ ಆಕಸ್ಮಿಕವಾಗಿ ಬಂದಂತೆ ಕಾಣುತ್ತಿಲ್ಲ. ಬದಲಾಗಿ, ನದಿಯಿಂದ ದಡಕ್ಕೆ ಬರಲು ಅದು ನಿತ್ಯವೂ ಅದೇ ಮಾರ್ಗವನ್ನು ಬಳಸುತ್ತಿರುವಂತೆ ತೋರುತ್ತಿದೆ. ಮರಳಿನ ಮೇಲೆ ಅದು ಸಾಗುವ ರೀತಿ ನೋಡಿದರೆ, ಈ ಭಾಗದಲ್ಲಿ ಅದು ಹಲವು ವರ್ಷಗಳಿಂದ ನೆಲೆಸಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ ನದಿ ಪಾತ್ರದ ಗ್ರಾಮಸ್ಥರು ದಿನನಿತ್ಯದ ಕೆಲಸಗಳಿಗಾಗಿ ನದಿಯನ್ನೇ ಅವಲಂಬಿಸಿದ್ದಾರೆ.

ಜಾನುವಾರುಗಳಿಗೆ ನೀರು ಕುಡಿಸಲು ನದಿಗೆ ಕರೆತರುವ ರೈತರು ಈಗ ಭಯಭೀತರಾಗಿದ್ದಾರೆ. ಬಟ್ಟೆ ತೊಳೆಯಲು, ವಾಹನಗಳನ್ನು ಸ್ವಚ್ಛಗೊಳಿಸಲು ಹಾಗೂ ಈಜಲು ನದಿಗೆ ಇಳಿಯುವವರಿಗೆ ಈ ಮೊಸಳೆ ಕಂಟಕವಾಗಿ ಪರಿಣಮಿಸಿದೆ.

ನದಿಯ ಆಳದಲ್ಲಿ ಅವಿತಿರುವ ಇಂತಹ ದೈತ್ಯ ಮೃಗಗಳು ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂಬ ಭಯದಿಂದಾಗಿ ರಾಂಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ನದಿಯ ಹತ್ತಿರ ಸುಳಿಯಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಯು ಕೂಡಲೇ ಎಚ್ಚೆತ್ತುಕೊಂಡು ಮೊಸಳೆಯನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !