ಹೊಸದಿಗಂತ ವರದಿ,ಮಡಿಕೇರಿ:
ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಅತ್ತೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆನ್ನಂಗೊಲ್ಲಿಯಲ್ಲಿ ನಡೆದಿದೆ.
ಚೆನ್ನಂಗೊಲ್ಲಿ ಸಮೀಪದ ಕೆ.ಕೆ ತಿಮ್ಮಯ್ಯ ಅವರ ಕೆರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಅವರ ತೋಟದ ಕಾರ್ಮಿಕಳಾಗಿರುವ ಭವಾನಿ ಎಂಬವರ ಪುತ್ರಿ ಲಾವಣ್ಯ (10) ಮೃತ ಬಾಲಕಿ.
ಚೆನ್ನಂಗೊಲ್ಲಿ ಸರ್ಕಾರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಲಾವಣ್ಯ, ಭಾನುವಾರ ಇತರ ಐವರು ಮಕ್ಕಳೊಂದಿಗೆ ಕೆರೆಯ ದಡದಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಳು.
ಆಟದ ಉತ್ಸಾಹದಲ್ಲಿ ಲಾವಣ್ಯ, ಉಷಾ, ಶೋಭಿತಾ ಕೆರೆಗೆ ಹಾರಿದ್ದಾರೆ. ತೋಟಕ್ಕೆ ನೀರು ಹಾಯಿಸಿದ್ದರಿಂದ ಬತ್ತಿದ್ದ ಕೆರೆಯಲ್ಲಿ ಕೇವಲ ಕೆಸರು ತುಂಬಿದ್ದು, ಮೂವರು ಮಕ್ಕಳು ಕೆಸರಿನಲ್ಲಿ ಸಿಲುಕಿಕೊಂಡು ಕಿರುಚಾಡಿದ್ದಾರೆ.
ದಡದ ಮೇಲಿದ್ದ ಪವನ್, ಲೋಹಿತ್ ಮತ್ತು ಶರಣ್ ಎಂಬ ಮೂವರು ಮಕ್ಕಳು ಪೋಷಕರಿಗೆ ಮಾಹಿತಿ ಮುಟ್ಟಿಸಲು ಓಡಿದ್ದಾರೆ. ಈ ಸಂದರ್ಭ ಆ ಮಾರ್ಗವಾಗಿ ಹಾದು ಹೋಗುತ್ತಿದ್ದ ಕಾರ್ಮಿಕರು ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದಾರೆ.
ಆದರೆ ಕೆಸರಿನಲ್ಲಿ ಸಿಲುಕಿದ ಇಬ್ಬರು ಮಕ್ಕಳನ್ನು ರಕ್ಷಿಸಲಾಯಿತಾದರೂ, ಲಾವಣ್ಯಳ ಜೀವ ಉಳಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.