ಹೊಸದಿಗಂತ ವರದಿ ಹಾವೇರಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ/ಅರೆ ಅಲೆಮಾರಿ/ಬುಡಕಟ್ಟು ಸಮುದಾಯಕ್ಕೆ ರಾಜ್ಯದ ಒಂದು ಲೋಕಸಭೆ ಟಿಕೆಟ್ ನೀಡುವ ಮೂಲಕ ನಮ್ಮ ಸಮುದಾಯದ ಜನರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಲು ಅವಕಾಶ ಮಾಡಿಕೊಡಬೇಕು ಎಂದು ಸಂಘಟನೆಯ ಅಧ್ಯಕ್ಷ ಶೆಟ್ಟಿ ವಿಭೂತಿ ಆಗ್ರಹಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಲೆಮಾರಿ/ಅರೆ ಅಲೆಮಾರಿ/ಬುಡಕಟ್ಟು ಸಮುದಾಯಕ್ಕೆ ಸೇರಿದ ಮೂವತ್ತು ಲಕ್ಷಕ್ಕೂ ಅಧಿಕ ಜನರಿದ್ದಾರೆ. ಸುಮಾರು 74 ಉಪಪಂಗಡಗಳಿವೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಈವರೆಗೂ ನಮ್ಮ ಸಮುದಾಯದ ಜನರಿಗೆ ಮೂಲಭೂತ ಸೌಕರ್ಯಗಳು ದೊರೆತಿಲ್ಲ.
ರಾಜ್ಯದ ಅನೇಕ ಕಡೆಗಳಲ್ಲಿ ಈಗಲೂ ನಮ್ಮ ಸಮುದಾಯದ ಜನರು ಗುಡಿಸಲು ನಿವಾಸಿಗಳಾಗಿ ಅಕ್ಷರಜ್ಞಾನವಿಲ್ಲದೆ, ಭಿಕ್ಷಾಟನೆ, ಕೂಲಿ ಕೆಲಸ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಮ್ಮ ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸಮುದಾಯದ ಮುಖಂಡರು ನಿರಂತರವಾಗಿ ಒಂದಿಲ್ಲ ಒಂದು ರೀತಿಯಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ ಎಂದರು.