ಡಿಕೆಶಿ ನೊಟೀಸ್ ಕೊಡಲಿ, ಆ ಮೇಲೆ ನಾನು ಮಾತಾಡ್ತೇನೆ: ಸಚಿವ ರಾಜಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‍ನಲ್ಲಿ ಸಿಎಂ ಹಾಗೂ ಡಿಸಿಎಂ ಫೈಟ್ ಜೋರಾಗುತ್ತಿದ್ದು, ಈ ವಿಚಾರದ ಬಗ್ಗೆ ಮಾತಾಡೋರಿಗೆ ನೊಟೀಸ್ ಕೊಡ್ತೀವಿ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಚಿವ ರಾಜಣ್ಣ (K.N Rajanna) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ನೊಟೀಸ್ ಕೊಡಲಿ ಕೊಟ್ಟ ಮೇಲೆ ನಾನು ಮಾತಾಡ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದು ಅವರು ಹೇಳಿರಬಹುದು. ಅದಕ್ಕೆ ನಾನು ಒಪ್ಪುತ್ತೇನೆ. ಬೇರೆಯವರು ಒಪ್ಪಬಹುದು. ನಾವು ಡಿಸಿಎಂ ಬಗ್ಗೆ ಹೇಳಿದ್ರೆ ಏನು ತಪ್ಪಾಗುತ್ತದೆ? ನಾವು ಕೇಳಬಾರದಾ? ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಎಂದರೆ ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ನಾನು ತಯಾರಿದ್ದೇನೆ ಎಂದು ಅವರು ಡಿಸಿಎಂಗೆ ಸವಾಲು ಹಾಕಿದ್ದಾರೆ.

ಡಿಕೆಶಿ ವಾರ್ನಿಂಗ್‌ಗೆ ನಾನು ಕೇಳ್ತೀನಾ? ನಾನು ನಾನೇ, ರಾಜಣ್ಣ ರಾಜಣ್ಣನೇ. ಅಧಿಕಾರಕ್ಕೆ ನಾನು ಅಂಟಿಕೊಳ್ಳೊಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಬೇಕು ಎಂದು ಡಿಕೆಶಿ ಹೇಳಿದ್ರೆ ಎಲ್ಲರೂ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಅವರು ಹೇಳೋರನ್ನ ಹೇಳೋದಕ್ಕೆ ಬಿಟ್ಟು ಬರೀ ನಮಗೆ ಹೇಳಿದ್ರೆ ನಾನು ಕೇಳುವವನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಿ ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಅದನ್ನ ಕೇಳಿಕೊಂಡು ನಾವು ಸುಮ್ಮನೆ ಇರೋಕೆ ಆಗುತ್ತಾ? ಸಿದ್ದರಾಮಯ್ಯರನ್ನ ಅವರು ಸಿಎಂ ಮಾಡಿದ್ರಾ? ಸಿದ್ದರಾಮಯ್ಯರನ್ನ ಸಿಎಂ ಮಾಡಿರೋದು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಮಾಡಿರೋದು. ಹಾಗೆ ಸಿಎಂ ಮಾಡೋದಾದ್ರೆ ಶಾಮನೂರು ಶಿವಶಂಕರಪ್ಪ ಅವರನ್ನ ಸಿಎಂ ಮಾಡಿ ಅಂತ ಸ್ವಾಮೀಜಿಗಳು ಹೇಳ್ತಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಸಿಎಂ ಮಾಡಿ ಅಂತ ಹೇಳ್ತಾರೆ. ಸ್ವಾಮೀಜಿಗಳು ಹೇಳಿದ ಹಾಗೇ ಸಿಎಂಗಳನ್ನ ಮಾಡೋಕೆ ಆಗುತ್ತಾ? ಸ್ವಾಮೀಜಿ ಹೇಳಿರೋ ಹೇಳಿಕೆ ಹಿಂದುಳಿದ ವರ್ಗಗಳಿಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವಕ್ಕೆ ಮಾಡಿರೋ ಅವಮಾನ ಎಂದು ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧವೂ ಅವರು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!