ಕೊಡಗು ಸೈನಿಕ ಶಾಲೆಯಲ್ಲಿ ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ

ಹೊಸ ದಿಗಂತ ವರದಿ, ಕುಶಾಲನಗರ:

ಕೂಡಿಗೆಯ ಕೊಡಗು ಸೈನಿಕ ಶಾಲೆಯಲ್ಲಿ ಮರಿಯಪ್ಪ ಕೆಂಪಯ್ಯ ಪುಟ್ಬಾಲ್ ಕ್ರೀಡಾಂಗಣವನ್ನು ಗುರುವಾರ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಏರ್ ಮಾರ್ಷಲ್ ಮನವೇಂದ್ರ ಸಿಂಗ್ ಕ್ರೀಡಾಂಗಣ ಉದ್ಘಾಟಿಸಿದರು.
ಮೊದಲಿಗೆ ಮುಖ್ಯ ಅತಿಥಿಗಳು ಶಾಲಾ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾಂಜಲಿ ಸಲ್ಲಿಸುವುದರ ಮೂಲಕ ಗೌರವ ಸಮರ್ಪಿಸಿದರು. ಹಾಗೂ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭ ಕಾವೇರಿ ಮತ್ತು ಹಾರಂಗಿ ತಂಡಗಳ ನಡುವೆ ಸೌಹಾರ್ದ ಫುಟ್ಬಾಲ್‌ ಪಂದ್ಯ ನಡೆದು, ಕಾವೇರಿ ತಂಡವು 1-0 ಗೋಲುಗಳೊಂದಿಗೆ ಜಯಗಳಿಸಿತು. ನಂತರ ಅತಿಥಿಗಳು ಫುಟ್ಬಾಲ್ ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಶಾಲೆಯ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮನವೇಂದ್ರ ಸಿಂಗ್ ಅವರು, ಶಾಲೆಯ ಮೂಲಭೂತ ಸೌಕರ್ಯಗಳನ್ನು ಕುರಿತು ಶ್ಲಾಘಿಸಿದರಲ್ಲದೆ, ಶಾಲೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಉತ್ತಮವಾದ ಬೋಧಕವರ್ಗ ಮತ್ತು ತರಬೇತಿ ವಿಭಾಗವನ್ನು ಹೊಂದಿದೆ ಎಂದು ತಿಳಿಸಿದರು.
ಜೀವನದಲ್ಲಿ ಮುಂದುವರೆಯಲು ಅತ್ಯುತ್ತಮವಾದ ದೈಹಿಕದಾರ್ಢ್ಯತೆ ಅವಶ್ಯಕವಾಗಿದೆ. ಇದರೊಂದಿಗೆ ತಾವು ಶೈಕ್ಷಣಿಕ ಸಾಧನೆ ಮೈಗೂಡಿಸಿಕೊಂಡು, ಸ್ವಯಂ ಅಧ್ಯಯನ, ಶಿಸ್ತು, ಸಂಯಮ ಮತ್ತು ಅವಕಾಶಗಳ ಸದುಪಯೋಗ ಪಡೆದುಕೊಂಡು ಸೇನಾ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇರ್ಪಡೆಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ 6ನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳಿಗೆ ತಮ್ಮದೇ ಆದ ನೂತನ ತರಬೇತಿಯ ಮೂಲಕ ಒಬ್ಬ ಆದರ್ಶ ನಾಗರರಿಕನ್ನಾಗಿ ಮಾಡುವಲ್ಲಿ ಶಾಲೆಯಲ್ಲಿನ ಅಧಿಕಾರಿ ವರ್ಗ, ಬೋಧಕ ಮತ್ತು ಬೋಧಕೇತರ ವರ್ಗದವರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಹೆಣ್ಣು ಮಕ್ಕಳಿಗೂ ಅವಕಾಶ
ಹಾಗೆಯೇ ಹೆಣ್ಣು ಮಕ್ಕಳಿಗೆ ಸೇನಾ ಇಲಾಖೆಯಲ್ಲಿ ಹಲವು ಅವಕಾಶಗಳಿದ್ದು, ಅವುಗಳನ್ನು ಶಾಲೆಯ ಹೆಣ್ಣು ಮಕ್ಕಳು ಸೇನಾ ಇಲಾಖೆಗೆ ಸೇರುವುದರ ಮೂಲಕವಾಗಿ ಸದುಪಯೋಗ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೆಡೆಟ್ ಎಸ್ ದಿವಾಕರ್ ನಿರೂಪಿಸಿ, ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲರು ವಂದಿಸಿದರು.
ಕಾರ್ಯಕ್ರಮದ ನಂತರ ಮುಖ್ಯ ಅತಿಥಿಗಳು ಮಡಿಕೇರಿಯಲ್ಲಿ ಏರ್ ಮಾರ್ಷಲ್ (ನಿವೃತ್ತ) ಕೆ ಸಿ ಕಾರ್ಯಪ್ಪ ಅವರನ್ನು ಭೇಟಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!