ನಟಿ ರನ್ಯಾ ರಾವ್ ಹಿಂದಿರುವ ಸಚಿವರ ಮಾಹಿತಿ ನೀಡಿ: ಬಿ.ವೈ.ವಿಜಯೇಂದ್ರ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಜೊತೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರನ್ಯಾ ರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ಇದೇನೂ ಸಣ್ಣ ಘಟನೆಯಲ್ಲ. ರನ್ಯಾ ರಾವ್ ಕಳೆದ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ದುಬೈಗೆ ಹಾಗೂ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಸಂಪೂರ್ಣವಾದ ಪ್ರೋಟೋಕಾಲ್ ವ್ಯವಸ್ಥೆ ನೀಡುತ್ತಿದ್ದರು ಎಂದು ಆರೋಪಿಸಿದರು.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರೋಟೋಕಾಲ್ ಸಿಗುತ್ತದೆ. ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲ ಎಂದಾದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ. ಅಲ್ಲದೇ ಕೆಲವು ಸಚಿವರಿದ್ದಾರೆ ಎಂಬುದು ಕೂಡ ಹೊರಕ್ಕೆ ಬರುತ್ತಿದೆ. ಈಗಾಗಲೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ. ಈ ಗಂಭೀರ ಪ್ರಕರಣದ ಹಿಂದಿರುವವರ ಮಾಹಿತಿ ಮುಖ್ಯಮಂತ್ರಿಗಳಿಗೆ ಇದ್ದೇ ಇರುತ್ತದೆ ಎಂದರು.

ಸ್ಮಗ್ಲಿಂಗ್ ಹಿಂದೆ ಇರುವ ಹವಾಲಾ ನಿರತರು, ಚಿನ್ನ ಕಳ್ಳಸಾಗಾಟದ ಮಾಫಿಯಾಗಳು, ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಸಿಎಂ ಅವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!