‘ಮೋದಿ ಗ್ಯಾರಂಟಿ’ ನೀಡಿದ ಬಿಜೆಪಿಗೆ ಕಮಲ ಅರಳಿಸುವ ಗ್ಯಾರಂಟಿ ನೀವು ಕೊಡಿ: ಕಲಬುರಗಿಯಲ್ಲಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮೋದಿ ಹವಾ ಆರಂಭವಾಗಿದೆ! ಕಳೆದ ಬಾರಿ ಕಲಬುರಗಿಯಿಂದಲೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಮೋದಿ, ಈ ಬಾರಿ ಮತ್ತೆ ಕಲಬುರಗಿಯಿಂದಲೇ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.

ಕಲಬುರ್ಗಿಯ ಎನ್.ವಿ. ಕ್ರೀಡಾ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಭಾಷಣದುದ್ದಕ್ಕೂ ಗುಡುಗಿದರು.

ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಿದ್ದಾರೆ ಶಾಸಕರು!

ಯುವ ಜನತೆಗೆ ಹಣ ನೀಡುತ್ತೇವೆ ಎನ್ನುವ ಕಾಂಗ್ರೆಸ್, ಸ್ಕಾಲರ್‌ಶಿಪ್ ಹಣಕ್ಕೇ ಕತ್ತರಿ ಹಾಕಿದೆ. ಗೃಹಜ್ಯೋತಿ ಎನ್ನುವ ಸರ್ಕಾರ, ವಿದ್ಯುತ್ತನ್ನೇ ನೀಡುತ್ತಿಲ್ಲ. ರೈತರ ಪಂಪ್ ಸೆಟ್‌ಗಳಿಗೂ ವಿದ್ಯುತ್ ಇಲ್ಲ. ಪಿಎಂ ಕಿಸಾನ್ ಯೋಜನೆಯಡಿ ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ನಾಲ್ಕು ಸಾವಿರ ರೂ. ಸೇರಿಸಿ ರೈತರಿಗೆ ನೀಡುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಿಎಂ ಕಿಸಾನ್ ಅಡಿ ರಾಜ್ಯ ಸರ್ಕಾರ ನೀಡುತ್ತಿದ ಹಣಕ್ಕೆ ಕತ್ತರಿ ಹಾಕಿದೆ.

ಚುನಾವಣೆಯಲ್ಲಿ ಘೋಷಣೆ ಮಾಡಿದ ಯೋಜನೆ ಜಾರಿ ಬಿಡಿ, ಬೇರೆ ಯೋಚನೆ ಮಾಡಲೂ ಕಾಂಗ್ರೆಸ್ ಬಳಿ ದುಡ್ಡಿಲ್ಲ. ಕಾಂಗ್ರೆಸ್ ಶಾಸಕರೇ ನಮ್ಮ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಸರ್ಕಾರದಿಂದ ನಿಮ್ಮ ಕನಸು ಈಡೇರುತ್ತದೆ ಎಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿದರು.

ಇವೆಲ್ಲವೂ ಮೋದಿ ಗ್ಯಾರಂಟಿ

ಮೋದಿ ಸರಕಾರವು 50 ಲಕ್ಷಕ್ಕೂ ಹೆಚ್ಚು ಜನರಿಗೆ ಕಿಸಾನ್ ಸಮ್ಮಾನ್ ಮೂಲಕ ವರದಾನವಾಗಿದೆ. ಅದೆಷ್ಟೋ ಮಂದಿ ಆರ್ಥಿಕ ಸಂಕಷ್ಟದಿಂದ ತಮ್ಮ ಕಾಯಿಲೆಗಳನ್ನು ಮಕ್ಕಳಿಂದ ಮುಚ್ಚಿಡುತ್ತಿದ್ದರು. ಆಯುಷ್ಮಾನ್ ಯೋಜನೆ ಜಾರಿಗೆ ತಂದು ಎಲ್ಲ ತಂದೆ ತಾಯಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಜೊತೆಗೆ ಐದು ಲಕ್ಷ ರೂ.ವರೆಗೆ ಚಿಕಿತ್ಸಾ ಪರಿಹಾರ ಕೂಡಾ ಕೊಡುತ್ತಿದ್ದೇವೆ.

ದೇಶದಲ್ಲಿ 80 ಲಕ್ಷದಷ್ಟು ಜನ ಇದರ ಲಾಭ ಪಡೆದು ಮೋದಿಗೆ ಆಶಿರ್ವಾದ ಹೇಳುತ್ತಿದ್ದಾರೆ. ಇಂದು ಉಚಿತ ಚಿಕಿತ್ಸೆ ಮೋದಿ ಗ್ಯಾರಂಟಿ ಆಗಿದೆ ಎಂದು ಪ್ರಧಾನಿ ಹೇಳಿದರು.

ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆಯಿಂದ ಗುಳೇ ಹೋಗುವ ಸ್ಥಿತಿ ಇತ್ತು. ನಾವು ಜಲಜೀವನ ಮಿಷನ್ ಮೂಲಕ ಪ್ರತೀ ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ ಕೊಟ್ಟಿದ್ದೇವೆ. ಹೊಗೆ ಮುಕ್ತ ಅಡುಗೆಮನೆ ಮಾಡಲು 40 ಲಕ್ಷಕ್ಕೂ ಅಧಿಕ ಎಲ್‌ಪಿಜಿ ಸಿಲಿಂಡರ್ ನೀಡಿದ್ದೇವೆ. ಇದೂ ಕೂಡಾ ಮೋದಿ ಗ್ಯಾರಂಟಿ ಎಂದು ಅವರು ಹೇಳಿದರು.

ನನಗೆ ಗ್ಯಾರಂಟಿ ಕೊಡಿ!

ನನಗೆ ಕರ್ನಾಟಕದಲ್ಲಿ ಬಿಜೆಪಿಯ ಪ್ರತಿಯೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುತ್ತೇವೆ, ಕಾಂಗ್ರೆಸ್‌ಗೆ ಖಾತೆ ತೆರೆಯಲು ಅವಕಾಶ ಕೊಡುವುದಿಲ್ಲ ಎಂಬ ಗ್ಯಾರಂಟಿ ಕೊಡಿ ಎಂದು ವಿನಂತಿಸಿದ ಮೋದಿ, ಬಿಜೆಪಿ ಕೇಂದ್ರ ಸರಕಾರವು ಕರ್ನಾಟಕದ ಅಭಿವೃದ್ಧಿಗೆ ಸದಾ ಶ್ರಮಿಸಿದೆ. ಈ ಬಾರಿ ಕರ್ನಾಟಕದ ಜನಾದೇಶ ಬಿಜೆಪಿ ಪರವಾಗಿ ಇರಲಿ. ರಾಜ್ಯದ ಎಲ್ಲ ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಕೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!