ಹೊಸ ದಿಗಂತ ಡಿಜಿಟಲ್ ಡೆಸ್ಕ್
ಚೀನಾ, ಹಾಂಕಾಂಗ್, ದಕ್ಷಿಣ ಕೊರಿಯಾಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಹಾಗಾದರೆ, ಭಾರತ ಈ ನಿಟ್ಟಿನಲ್ಲಿ ಇನ್ನೊಂದು ಅಲೆ ತಡೆಯುವುದಕ್ಕೆ ನಿಯಂತ್ರಣಗಳನ್ನು ಹೇರಬೇಕೆ? ಈ ಪ್ರಶ್ನೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಪರಿಣತರು ಉತ್ತರ ಹೇಳಿದ್ದಾರೆ.
“ಯಾವುದೋ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಿದೆಯೆಂದು ಯಾವತ್ತೂ ಭಯದಲ್ಲೇ ಬದುಕಲಾಗುವುದಿಲ್ಲ. ನಮ್ಮಲ್ಲಿನ ಜಿನೋಮ್ ವಿಶ್ಲೇಷಣೆ, ರೋಗ ಮಾದರಿಯ ಪರೀಕ್ಷೆಗಳು ನಿರಂತರ ಆಗುತ್ತಿರುತ್ತವೆ. ರಾಜ್ಯಗಳು ಸ್ವಚ್ಛತೆ, ರೋಗತಡೆ ಕ್ರಮಗಳ ಬಗ್ಗೆ ನಿಗಾ ವಹಿಸಿಕೊಂಡಿರಬೇಕು ಎಂಬ ಬಗ್ಗೆ ತಕರಾರಿಲ್ಲ. ಆದರೆ, ಬೇರೆ ದೇಶಗಳಲ್ಲಾಗಿದ್ದು ಇಲ್ಲೂ ಆಗುತ್ತದೆ ಎಂದು ಹೊಸ ನಿಯಂತ್ರಣಗಳನ್ನು ಹೇರುವ ಅಗತ್ಯವಿಲ್ಲ. ಏಕೆಂದರೆ ಪ್ರತಿ ದೇಶಗಳೂ ಅವರದ್ದೇ ಆದ ರೀತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡುಬಂದಿವೆ. ಹೀಗಾಗಿ ಒಂದರಲ್ಲಿ ಬಂದಂಥ ಸ್ಥಿತಿ ಇನ್ನೊಂದು ದೇಶದಲ್ಲಿ ಮರುಕಳಿಸುತ್ತದೆ ಎನ್ನವುದಕ್ಕೆ ಆಧಾರವಿಲ್ಲ” ಎಂದಿದ್ದಾರೆ ಐ ಸಿ ಎಂ ಆರ್ ನ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಾ. ಸಮೀರನ್ ಪಂಡಾ.