ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ನಂತರದ ಕಾಲಘಟ್ಟದ ಸಂದರ್ಭದಲ್ಲಿ ಜಗತ್ತಿನಾದ್ಯಂದ ವಾರ್ಷಿಕ ಹಣದುಬ್ಬರವು ಅಸಾಮಾನ್ಯವಾಗಿ ಹೆಚ್ಚಿನ ಮಟ್ಟದಲ್ಲಿ ಚಾಲ್ತಿಯಲ್ಲಿದೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಆಯಾ ದೇಶಗಳ ಕೇಂದ್ರಿಯ ಬ್ಯಾಂಕುಗಳು ಬಡ್ಡಿದರಗಳನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿವೆ. RBI ಸೇರಿದಂತೆ ಹಲವು ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಏರಿಸಿದ್ದು US ಫೆಡರಲ್ ರಿಸರ್ವ್ ಬುಧವಾರ ಬೆಂಚ್‌ಮಾರ್ಕ್ ಎರವಲು ದರವನ್ನು 0.75 ಶೇಕಡಾ ಪಾಯಿಂಟ್ ಹೆಚ್ಚಿಸಿದೆ. ಇದು ಈ ವರ್ಷದ ಆರನೇ ಏರಿಕೆಯಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕೂಡ ಬಡ್ಡಿದರವನ್ನು 2.25 ರಿಂದ 3 ಶೇಕಡಾಗೆ ಹೆಚ್ಚಿಸಿದೆ ಇದು ಕಳೆದ 33 ವರ್ಷಗಳಲ್ಲಿ ಬಡ್ಡಿದರದಲ್ಲಿ ಗರಿಷ್ಠ ಏರಿಕೆಯಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.
ಇನ್ನು ಜಾಗತಿಕವಾಗಿ ಯಾವ್ಯಾವ ದೇಶಗಳು ಯಾವ ಪ್ರಮಾಣದ ಹಣದುಬ್ಬರ ದರವನ್ನು ಹೊಂದಿವೆ ಎಂದು ನೋಡುವುದಾದರೆ ಟರ್ಕಿಯು ವಿಶ್ವದ ಅತಿ ಹೆಚ್ಚು ಹಣದುಬ್ಬರ ದರವನ್ನು ಹೊಂದಿದ್ದು 85.51 ಪ್ರತಿಶತದಷ್ಟಿದೆ. ಇದು ಕಳೆದ 24 ವರ್ಷಗಳಲ್ಲೇ ಅತಿ ಹೆಚ್ಚಿನದಾಗಿದೆ. ನಂತರದ ಸ್ಥಾನದಲ್ಲಿ ಅರ್ಜೆಂಟೀನಾ ದೇಶವಿದ್ದು ಅಲ್ಲಿ ಹಣದುಬ್ಬರ ದರವು ಪ್ರಸ್ತುತ ಶೇಕಡಾ 83 ರಷ್ಟಿದೆ.
ನೆದರ್ಲ್ಯಾಂಡ್ಸ್ ಶೇಕಡಾ 14.5ರಷ್ಟು ಹಣದುಬ್ಬರ ದರ ಹೊಂದಿದ್ದರೆ ನಂತರದ ಸ್ಥಾನಗಳಲ್ಲಿ ರಷ್ಯಾ (ಶೇ. 13.7); ಇಟಲಿ (ಶೇ. 11.9); ಜರ್ಮನಿ (ಶೇ. 10.4); ಯುಕೆ (ಶೇ 10.1); ಯುಎಸ್ (ಶೇ. 8.2); ಮತ್ತು ದಕ್ಷಿಣ ಆಫ್ರಿಕಾ (ಶೇ. 7.5) ದೇಶಗಳಿವೆ.
ಭಾರತದಲ್ಲಿ ಹಣದುಬ್ಬರ ದರವು ಪ್ರಸ್ತುತ ಶೇಕಡಾ 7.4 ರಷ್ಟಿದೆ, ಭಾರತದ ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ದೇಶವಿದ್ದು ಶೇಕಡಾ 7.3 ರಷ್ಟು ಹಣದುಬ್ಬರ ದರ ಹೊಂದಿದೆ. ಬ್ರೆಜಿಲ್ (ಶೇ. 7.1); ಕೆನಡಾ (ಶೇ. 6.9); ಫ್ರಾನ್ಸ್ (ಶೇ. 6.2); ಇಂಡೋನೇಷ್ಯಾ (ಶೇ. 5.9); ದಕ್ಷಿಣ ಕೊರಿಯಾ (ಶೇ. 5.6); ಸೌದಿ ಅರೇಬಿಯಾ (ಶೇ. 3.1); ಜಪಾನ್ (ಶೇ. 3); ಮತ್ತು ಚೀನಾ (ಶೇ. 2.8) ರಷ್ಟು ಹಣದುಬ್ಬರ ದರ ಹೊಂದಿವೆ.
ಭಾರತದಲ್ಲಿ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರಿಯನ್ನು ಕಳೆದ ಒಂಬತ್ತು ತಿಂಗಳುಗಳಿಂದ ಸತತವಾಗಿ ಮೀರಿದ್ದರೂ ಯುಎಸ್, ಯುಕೆ, ರಷ್ಯಾ, ಜರ್ಮನಿ, ಟರ್ಕಿ, ದಕ್ಷಿಣ ಆಫ್ರಿಕಾ ಮತ್ತು ಇಟಲಿ ಸೇರಿದಂತೆ ಇತರ ಪ್ರಮುಖ ಜಾಗತಿಕ ಆರ್ಥಿಕತೆಗಳಿಗೆ ಹೋಲಿಸಿದರೆ ಬೆಲೆ ಏರಿಕೆಯ ದರವು ಕಡಿಮೆಯಾಗಿದೆ.