ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಸ್ಥಗಿತಗೊಂಡಿರುವ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಜಾಗತಿಕ ನಾಯಕರು ಮುಂದಾಗಿದ್ದು, ಈ ಹಿನ್ನೆಲೆ ಬ್ರಿಟನ್ ಆಯೋಜಿಸಿರುವ 30ಕ್ಕೂ ಹೆಚ್ಚು ರಾಷ್ಟ್ರಗಳ ವರ್ಚುವಲ್ ಸಮಾವೇಶದಲ್ಲಿ ಭಾರತ ಭಾಗವಹಿಸಿದೆ.
ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ , ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತ ಮಾತುಕತೆಗಾಗಿ ಬ್ರಿಟನ್ ಭಾರತಕ್ಕೆ ಅಧಿಕೃತ ಆಹ್ವಾನ ನೀಡಿದ್ದು, ಈ ಹಿನ್ನೆಲೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪ್ರತಿನಿಧಿಸುತ್ತಿದ್ದಾರೆ ಎಂದು ತಿಳಿಸಿದರು.
ಆದರೆ ಈ ಬೃಹತ್ ಒಕ್ಕೂಟದಿಂದ ಅಮೆರಿಕ ಹೊರಗುಳಿದಿದ್ದು, ಬ್ರಿಟನ್ ಈ ಸಭೆಯ ಸಾರಥ್ಯ ವಹಿಸಿಕೊಂಡಿದೆ .
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ಮೇಲಿನ ನಿರ್ಬಂಧ ತೆರೆಯಲು ಜೊತೆಯಾಗಿ ಎಂದು ಕರೆ ನೀಡಿದ್ದ ಸಂದರ್ಭ ಜಾಗತಿಕ ನಾಯಕರು ಹಿಂದೇಟು ಹಾಕಿದ್ದರು. ಈ ಕಾರಣದಿಂದ ಟ್ರಂಪ್ ಜಲಸಂಧಿ ಸುರಕ್ಷಿತಗೊಳಿಸುವುದು ಅಮೆರಿಕದ ಕೆಲಸವಲ್ಲ ಎಂದು ಟ್ರಂಪ್ ಖಡಕ್ ಆಗಿ ಹೇಳಿದ್ದರು. ಇದರ ಬೆನ್ನಲ್ಲೇ ಬ್ರಿಟನ್ ಈ ಸಭೆ ಕರೆದಿರುವುದು ಮಹತ್ವ ಪಡೆದಿದೆ.



