Monday, July 4, 2022

Latest Posts

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಭರದ ಸಿದ್ಧತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಮುಂಬರುವ ನ.2ರಿಂದ 4ರವರೆಗೆ ಹಮ್ಮಿಕೊಂಡಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ವಿವಿಧ ರಾಜ್ಯ ಹಾಗೂ ವಿದೇಶಗಳಲ್ಲಿ ರೋಡ್‌ಶೋ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೂಡಿಕೆದಾರರ ಸಮಾವೇಶ ಕುರಿತು ಎರಡು ದಿನದ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ೬೫ ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು. ಜರ್ಮನಿ, ಜಪಾನ್, ಯುಕೆ ಸೇರಿದಂತೆ ೭ ದೇಶಗಳ ರಾಯಭಾರಿಗಳ ಜತೆ ಸಿಎಂ ಅವರು ಮುಖಾಮುಖಿ ಮಾತುಕತೆ ನಡೆಸಿದ್ದಾರೆ. ಹೂಡಿಕೆದಾರರ ಸಮಾವೇಶ ಮೂಲಕ ರಾಜ್ಯಕ್ಕೆ ಬಂಡವಾಳ ಹರಿದುಬರಲಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಕಳೆದ ಒಂದು ವರ್ಷದಿಂದ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಒಟ್ಟು ದೇಶದ ಪಾಲಿನಲ್ಲಿ ಕರ್ನಾಟಕದ ಪಾಲು ೪೨ ಶೇ. ಇದೆ ಎಂದರು.
ಉದ್ದಿಮೆ ಆರಂಭಿಸಲು ಸರ್ಕಾರದಿಂದ ವಿಶೇಷ ರಿಯಾಯಿತಿ ದರದಲ್ಲಿ ಭೂಮಿ ಪಡೆದು ಉದ್ದೇಶಿತ ಯೋಜನೆಗೆ ಬಳಸದ ವ್ಯಕ್ತಿ, ಸಂಸ್ಥೆಗಳಿಂದ ಸಂಬಂಸಿದ ಭೂಮಿಯನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದಲ್ಲಿ ೧೮೮ ಕೈಗಾರಿಕಾ ಪ್ರದೇಶಗಳಿದ್ದು, ಇಲ್ಲಿ ಕೈಗಾರಿಕೆ ಉದ್ದೇಶಕ್ಕಾಗಿ ಪಡೆದ ಭೂಮಿಯನ್ನು ಉದ್ದೇಶಿತ ಯೋಜನೆಗೆ ಉಪಯೋಗಿಸದೆ ಇರುವ ಪ್ರಕರಣಗಳ ನಿಖರ ಅಂಕಿಂಶಗಳನ್ನು ಕಲೆ ಹಾಕಲಾಗುತ್ತಿದ್ದು, ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಮಿ ಪಡೆದ ಕೆಲವು ವ್ಯಕ್ತಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಯೋಜನೆ ಕಾರ್ಯಗತಗೊಳಿಸದ ಎಲ್ಲ ವ್ಯಕ್ತಿಗಳಿಗೆ ನೊಟೀಸ್ ನೀಡಿ ನಿರ್ದಾಕ್ಷಿಣ್ಯವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಹಂಚಿಕೆಯಾಗಬೇಕು ಎಂಬುದು ನಮ್ಮ ಇಲಾಖೆಯ ಪರಿಕಲ್ಪನೆ. ಅದಕ್ಕಾಗಿ ಒಂದು ಜಿಲ್ಲೆಗೆ ಒಂದು ಕೈಗಾರಿಕೆ ಎನ್ನುವ ನೀತಿಯಲ್ಲಿ ಕೈಗಾರಿಕೆಗಳನ್ನು ಹಂಚಿಕೆ ಮಾಡುತ್ತಿದ್ದೇವೆ ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕೆಐಎಡಿಬಿ ಸಿಇಒ ಡಾ.ಎನ್.ಶಿವಶಂಕರ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss