ʼಪಾವತಿ ನೀಡದಿದ್ರೆ ಸೇವೆ ನಿಲ್ಲಿಸುತ್ತೇವೆʼ- ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಜಾಗತಿಕ ಹಡಗು ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಭಯೋತ್ಪಾದನೆ ಇನ್ನೊಂದೆಡೆ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನದ ಪರಿಸ್ಥಿತಿ ಚಿಂತಾಜನಕವಾಗಿದೆ. ಆಂತರಿಕವಾಗಿ ಹಣದುಬ್ಬರ ಹೆಚ್ಚಾಗಿದ್ದು ಆಹಾರ ಬೆಲೆಗಳು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಹೊಟ್ಟೆಗೆ ಹಿಟ್ಟಿಲ್ಲದೇ ಜನಸಾಮಾನ್ಯರು ಪರದಾಡುವಂತಾಗಿದೆ. ಪಾಕಿಸ್ತಾನದ ವಿದೇಶಿ ವಿನಿಮಯವೂ ಕೂಡ ಕುಸಿದಿದ್ದು ಕೇವಲ ಒಂದು ವಾರಗಳ ಆಮದಿಗೆ ಪಾವತಿಸುವಷ್ಟು ಮಾತ್ರ ವಿದೇಶಿ ವಿನಿಮಯ ಹೊಂದಿದೆ ಎಂದು ವರದಿಯಾಗಿದೆ. ಡಾಲರ್‌ ಕೊರತೆ ಎದುರಿಸುತ್ತಿರುವ ಪಾಕಿಸ್ತಾನಕ್ಕೀಗ ಮತ್ತೊಂದು ಆಘಾತವುಂಟಾಗಿದ್ದು ಸರಕುಸಾಗಣೆ ಮಾಡುವ ಅಂತರಾಷ್ಟ್ರೀಯ ಹಡಗು ಕಂಪನಿಗಳು ಸೇವೆ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿವೆ.

ಪಾಕಿಸ್ತಾನದ ಬ್ಯಾಂಕುಗಳು ಸರಕು ಸಾಗಣೆ ಶುಲ್ಕವನ್ನು ಪಾವತಿಸುವಲ್ಲಿ ವಿಳಂಬ ಮಾಡುತ್ತಿವೆ. ಡಾಲರ್‌ ಕೊರತೆ ಇರುವುದರಿಂದ ಹಡಗು ಕಂಪನಿಗಳಿಗೆ ಪಾವತಿ ಮಾಡಲು ಹಣವಿಲ್ಲ. ಹೀಗಾಗಿ ಪಾವತಿಯನ್ನು ಬ್ಯಾಂಕುಗಳು ನಿಲ್ಲಿಸಿವೆ. ಇದರಿಂದ ಮುನಿಸಿಕೊಂಡಿರುವ ಶಿಪ್ಪಿಂಗ್‌ ಕಂಪನಿಗಳು ನಗದು ಕೊರತೆಯಲ್ಲಿರುವ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಗಡಿಭಾಗದ ದೇಶಗಳ ಹೊರತಾಗಿ, ಪಾಕಿಸ್ತಾನದ ಬಹುತೇಕ ಎಲ್ಲಾ ಅಂತರರಾಷ್ಟ್ರೀಯ ಸರಕುಗಳು ಸಮುದ್ರ ಮಾರ್ಗದ ಮೂಲಕವೇ ಪೂರೈಸಲ್ಪಡುತ್ತವೆ. ಒಂದು ವೇಳೆ ಈ ಸಾಗಣೆ ವ್ಯವಸ್ಥೆಗೆ ಧಕ್ಕೆಯಾದರೆ ಇದು ದೇಶದ ಅಂತರಾಷ್ಟ್ರೀಯ ವ್ಯಾಪಾರದ ಮೇಲೆ ಗಂಭೀರ ಸಮಸ್ಯೆ ಬೀರಲಿದೆ ಎಂದು ಪಾಕಿಸ್ತಾನ ಶಿಪ್ ಏಜೆಂಟ್ಸ್ ಅಸೋಸಿಯೇಷನ್ ​​(PSAA) ಅಧ್ಯಕ್ಷ ಅಬ್ದುಲ್ ರೌಫ್ ಹಣಕಾಸು ಸಚಿವ ಇಶಾಕ್ ದಾರ್ ಅವರಿಗೆ ಪತ್ರದ ಮೂಲಕ ಎಚ್ಚರಿಸಿದ್ದಾರೆ.

“ಅಂತರರಾಷ್ಟ್ರೀಯ ವ್ಯಾಪಾರವನ್ನು ನಿಲ್ಲಿಸಿದರೆ ಆರ್ಥಿಕ ಪರಿಸ್ಥಿತಿಯು ಹದಗೆಡುತ್ತದೆ” ಎಂದು ಅಸೋಸಿಯೇಷನ್ ​​ಎಚ್ಚರಿಸಿದೆ, ಪಾವತಿ ವಿಳಂಬದಿಂದಾಗಿ ವಿದೇಶಿ ಹಡಗು ಮಾರ್ಗಗಳು ಈಗಾಗಲೇ ಪಾಕಿಸ್ತಾನದಲ್ಲಿ ತಮ್ಮ ಸೇವೆಗಳನ್ನು ಮುಕ್ತಾಯಗೊಳಿಸಲು ಯೋಚಿಸುತ್ತಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!