ತಲಕಾವೇರಿಯಲ್ಲಿ ಮರುಕಳಿಸಿದ ವೈಭವ: ದರುಶನ ನೀಡಿದ ಮಾತೆ ಕಾವೇರಿ

ಹೊಸದಿಗಂತ ವರದಿ, ತಲಕಾವೇರಿ (ಕೊಡಗು):

ಮಂಜು, ಮೋಡ ಕವಿದ ವಾತಾವರಣ, ಕುಳಿರ್ಗಾಳಿಯ ತಣ್ಣನೆಯ ಅನುಭವ. ಅರ್ಚಕ ಸಮೂಹದಿಂದ ಮಂತ್ರಘೋಷ ಸಹಿತ ನಿರಂತರ ಅರ್ಚನೆ.. ನೆರೆದಿದ್ದ ಭಕ್ತರ ಉದ್ಘೋಷದ ನಡುವೆ ಇಲ್ಲಿನ ಬ್ರಹ್ಮಕುಂಡಿಕೆಯಲ್ಲಿ ನಿಗದಿತ ಸಮಯಕ್ಕಿಂತ ಎರಡು ನಿಮಿಷ ತಡವಾಗಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನರೆದಿದ್ದ ಭಕ್ತಾದಿಗಳನ್ನು ಪುಳಕಿತರನ್ನಾಗಿಸಿದಳು.

ಪಶ್ಚಿಮಘಟ್ಟ ಶ್ರೇಣಿಯ ಬ್ರಹ್ಮಗಿರಿ ಬೆಟ್ಟದ ಮನಮೋಹಕ ನಿಸರ್ಗ ಸಿರಿಯ ಮಡಿಲಿನಲ್ಲಿರುವ ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಭಕ್ತಿ ಭಾವ ಪರವಶರಾಗಿದ್ದ ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಅರ್ಚಕ ಗಣದ ವೇದಘೋಷ, ಮಂತ್ರಪಠಣ, ಕುಂಕುಮಾರ್ಚನೆ ನಡುವೆ ಸೋಮವಾರ ರಾತ್ರಿ 7.23ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ದಕ್ಷಿಣ ಗಂಗೆ, ಮಾತೆ ಕಾವೇರಿಯು ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು.

ಈ ಬಾರಿ ರಾತ್ರಿ 7ಗಂಟೆ 21ನಿಮಿಷಕ್ಕೆ ತೀರ್ಥೋದ್ಭವವಾಗಲಿರುವುದಾಗಿ ಆಗಮ ಪಂಡಿತರು ಭವಿಷ್ಯ ನುಡಿದಿದ್ದರಾದರೂ, ಅವಧಿಗೆ ಎರಡು ನಿಮಿಷ ತಡವಾಗಿ ಮಾತೆ ಕಾವೇರಿಯು ಬ್ರಹ್ಮಕುಂಡಿಕೆಯಲ್ಲಿ ಆವಿರ್ಭವಿಸುವ ಮೂಲಕ ನೆರೆದಿದ್ದ ಭಕ್ತ ಸಮೂಹವನ್ನು ಪುಳಕಿತರನ್ನಾಗಿಸಿದಳು.

ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಳೆಗುಂದಿದ್ದ ಕಾವೇರಿ ತೀರ್ಥೋದ್ಭವದ ವೈಭವ ಈ ಬಾರಿ ಮತ್ತೆ ಮರುಕಳಿಸಿತು. ಈ ಬಾರಿ ಭಕ್ತರಿಗೆ ತೀರ್ಥಸ್ನಾನಕ್ಕೆ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಾರಂಭಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!