April 11, 2026
Saturday, April 11, 2026
spot_img

‘ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ ಕಸ ಗುಡಿಸಿ’ : ಶೋಕಿ ಮಾಡಿದ ಚಾಲಕನಿಗೆ ಹೈಕೋರ್ಟ್ ಪಾಠ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಅತಿ ವೇಗವಾಗಿ ಸಂಚರಿಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ವಿಶಿಷ್ಟ ಸಮುದಾಯ ಸೇವಾ ಶಿಕ್ಷೆ ವಿಧಿಸಿದೆ. ತನ್ನದೇ ಹಸಿರು ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಕಸ ಗುಡಿಸಿ, ಅದೇ ವಾಹನದಲ್ಲಿ ವಾಪಸ್ ಬರಬೇಕೆಂದು ನ್ಯಾಯಾಲಯ ಮೌಖಿಕ ಸೂಚನೆ ನೀಡಿದೆ.

ಜನವರಿ 20ರಂದು ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿ ಚಿರಂತನ್ ಎಂಬಾತ ಲ್ಯಾಂಬೋರ್ಗಿನಿ ಕಾರನ್ನು ಅಜಾಗರೂಕತೆ ಮತ್ತು ಅತಿ ವೇಗದಲ್ಲಿ ಚಲಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಈ ಪ್ರಕರಣದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ. ವಿಚಾರಣೆ ವೇಳೆ ಆರೋಪಿಯ ಪರ ವಕೀಲರು, ತಮ್ಮ ಕಕ್ಷಿದಾರನಿಗೆ ತನ್ನ ತಪ್ಪಿನ ಅರಿವು ಉಂಟಾಗಿದ್ದು, ಸಮುದಾಯ ಸೇವೆ ಮಾಡಲು ಸಿದ್ಧನಿದ್ದಾನೆ ಎಂದು ತಿಳಿಸಿದರು.

ಇದನ್ನೂ ಓದಿ:

ಇದಕ್ಕೆ ಪ್ರತಿಯಾಗಿ ಸರ್ಕಾರಿ ಅಭಿಯೋಜಕರು, ನಿಯಮ ಉಲ್ಲಂಘಿಸಿದ ವ್ಯಕ್ತಿಯಿಂದ ಮಕ್ಕಳಿಗೆ ಸಂಚಾರ ನಿಯಮ ಬೋಧನೆ ಮಾಡಿಸುವುದು ಸೂಕ್ತವಲ್ಲ ಎಂದು ವಾದಿಸಿದರು. ಬದಲಾಗಿ ಗಿಡ ನೆಡುವುದು ಅಥವಾ ಸಾರ್ವಜನಿಕ ಸೇವೆಯ ಕೆಲಸ ನೀಡುವಂತೆ ಸಲಹೆ ನೀಡಿದರು.

ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ, ರಸ್ತೆ ಸ್ವಚ್ಛತಾ ಕಾರ್ಯದ ಮೂಲಕ ಸಮಾಜಕ್ಕೆ ಸಂದೇಶ ನೀಡುವಂತೆ ಸೂಚಿಸಿದೆ. ಸಮುದಾಯ ಸೇವೆಯ ನಿಖರ ದಿನಾಂಕ ಮತ್ತು ಸಮಯವನ್ನು ನ್ಯಾಯಾಲಯ ಮುಂದಿನ ಆದೇಶದಲ್ಲಿ ತಿಳಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !