ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಹುಲಿ ಬದಲು ಗೋವನ್ನು ಘೋಷಣೆ ಮಾಡುವ ಯೋಜನೆ ಕೇಂದ್ರ ಸರ್ಕಾರಕ್ಕಿದೆಯಾ ಎಂಬ ಪಶ್ನೆ ಇಂದು ಸಂಸತ್ತಿನಲ್ಲಿ ಎದ್ದಿತ್ತು.
ಈ ಕುರಿತು ಉತ್ತರ ನೀಡಿದ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಹಾಗೂ ರಾಷ್ಟ್ರೀಯ ಪಕ್ಷಿ ನವಿಲು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಾಪದ ವೇಳೆ ಅಜ್ಮೀರ್ ಸಂಸದ ಭಾಗೀರತ್ ಚೌಧರಿ ಈ ಕುರಿತು ಸಚಿವರನ್ನು ಪ್ರಶ್ನಿಸಿದ್ದಾರೆ.
2011ರಲ್ಲಿ ಹುಲಿ ಹಾಗೂ ನವಿಲನ್ನು ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್(1972) ಶೆಡ್ಯೂಲ್ ಐನಲ್ಲಿ ಸೇರಿಸಲಾಗಿದೆ. ಈ ಮೂಲಕ ಹುಲಿ ಹಾಗೂ ನವಿಲು ಸಂರಕ್ಷಣೆಗೆ ವಿಶೇಷ ಅದ್ಯತೆ ನೀಡಲಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ಪಕ್ಷಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ವನ್ಯ ಜೀವಿಗಳ ಸಂರಕ್ಷಿಸಲು ಹಲವು ಯೋಜನೆಗಳಿವೆ. ಆದರೆ ಗೋಮಾತೆ ಸನಾತನ ಧರ್ಮದಲ್ಲಿ ಪ್ರಮುಖವಾಗಿದೆ. ಗೋಮಾತೆಯನ್ನು ಪೂಜಿಸಲಾಗುತ್ತದೆ. ದೇವರ ಸ್ವರೂಪದಲ್ಲಿ ಗೋಮಾತೆಯ ಪೂಜೆ ನಡೆಯುತ್ತದೆ. ಹೀಗಾಗಿ ಹಿಂದೂಗಳಿಗೆ ಗೋಮಾತೆ ಅತ್ಯಂತ ಶ್ರೇಷ್ಠ ಪ್ರಾಣಿಯಾಗಿದೆ. ಹೀಗಾಗಿ ಗೋಮಾತೆ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.