ಹೊಸದಿಗಂತ ಡಿಜಿಟಲ್ ಡೆಸ್ಕ್
ಅಮೆರಿಕ ಸಂಸತ್ ನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಸಿಯಾಟಲ್ ಪ್ರದೇಶವನ್ನು ಪ್ರತಿನಿಧಿಸುವ ಭಾರತೀಯ ಮೂಲದ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ತಮಗೆ ಅನಾಮದೇಯ ವ್ಯಕ್ತಿಗಳಿಂದ ಬರುತ್ತಿರುವ ದ್ವೇಷಪೂರಿತ ಹಾಗೂ ಬೆದರಿಕೆಯ ಸಂದೇಶಗಳನ್ನು ಬಹಿರಂಗಪಡಿಸಿದ್ದಾರೆ.
ಚೆನ್ನೈ ಮೂಲದ ಪ್ರಮೀಳಾ, ತಮಗೆ ಫೋನ್ ಮೂಲಕ ಬಂದ ನಿಂದನೀಯ ಮತ್ತು ದ್ವೇಷದ ಸಂದೇಶಗಳಿರುವ ಐದು ಆಡಿಯೊ ಸಂದೇಶಗಳ ಸಂಗ್ರಹವನ್ನು ಹಂಚಿಕೊಂಡಿದ್ದಾರೆ. ಈ ಕರೆಗಳಲ್ಲಿ ಪುರುಷನೊಬ್ಬ ʼನೀನು ಭಾರತಕ್ಕೆ ವಾಪಸ್ ಹೋಗುʼ ಎಂದು ಬೆದರಿಸುವುದನ್ನು ಕೇಳಬಹುದು.
ರಾಜಕೀಯ ವ್ಯಕ್ತಿಗಳು ಸಾಮಾನ್ಯವಾಗಿ ಇಂತಹ ಸಂಗತಿಗಳನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ಇಂತಹ ಹಿಂಸಾಚಾರವನ್ನು ನಮ್ಮ ಹೊಸ ರೂಢಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ ನಾನು ಇಲ್ಲಿ ಇದನ್ನು ಬಹಿರಂಗಪಡಿಸಲು ನಿರ್ಧರಿಸಿದ್ದೇನೆ. ಈ ಹಿಂಸಾಚಾರಕ್ಕೆ ಆಧಾರವಾಗಿರುವ ಮತ್ತು ಪ್ರಚೋದಿಸುವ ವರ್ಣಭೇದ ನೀತಿ ಮತ್ತು ಲಿಂಗಭೇದಭಾವವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಡೆಮಾಕ್ರಟಿಕ್ ಪಕ್ಷದ ಜಯಪಾಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ಬೇಸಿಗೆಯ ಆರಂಭದಲ್ಲಿ, ಸಿಯಾಟಲ್‌ನಲ್ಲಿರುವ ಕಾಂಗ್ರೆಸ್ ಸಂಸದೆ ಪ್ರಮೀಳಾ ಮನೆಯ ಹೊರಗೆ ಪಿಸ್ತೂಲ್‌ನೊಂದಿಗೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದ. ಬ್ರೆಟ್ ಫೋರ್ಸೆಲ್ ಎಂದು ಪೊಲೀಸರು ಗುರುತಿಸಿರುವ ವ್ಯಕ್ತಿಯನ್ನು ನಂತರ ಬಂಧಿಸಲಾಯಿತು.
ಅಮೆರಿಕಾದಲ್ಲಿ ಇತ್ತೀಚೆಗೆ ಭಾರತೀಯರ ಮೇಲಿನ ದ್ವೇಷ ಪ್ರವೃತ್ತಿ ಹೆಚ್ಚುತ್ತಿದೆ. ಸೆಪ್ಟೆಂಬರ್ 1 ರಂದು, ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ-ಅಮೆರಿಕನ್ ವ್ಯಕ್ತಿಯನ್ನು ಜನಾಂಗೀಯ ನಿಂದನೆ ಮಾಡಲಾಗಿತ್ತು.
ಆಗಸ್ಟ್ 26 ರಂದು, ನಾಲ್ಕು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಟೆಕ್ಸಾಸ್‌ನಲ್ಲಿ ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬರು ಜನಾಂಗೀಯ ನಿಂದನೆ ಮಾಡಿ ಥಳಿಸಿದ್ದಳು. ಆ ವೇಳೆ ಅವಳು, ನೀವು ಅಮೆರಿಕವನ್ನು “ಹಾಳು” ಮಾಡುತ್ತಿದ್ದೀರಿ ಮತ್ತು “ಭಾರತಕ್ಕೆ ಹಿಂತಿರುಗಿ” ಎಂದು ಭಾರತೀಯರನ್ನು ನಿಂದಿಸಿದ್ದಳು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ