ಕಾಶ್ಮೀರಕ್ಕೆ ಹೋಗಿ, ನಿಮ್ಮನ್ನು ಹತ್ಯೆ ಮಾಡಲು ತೀವ್ರವಾದಿಯನ್ನು ಕಳುಹಿಸುತ್ತೇನೆ: ರಾಜ್ಯಪಾಲರಿಗೆ ಡಿಎಂಕೆ ಕಾರ್ಯಕರ್ತನ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ರಾಜ್ಯಪಾಲ ಆರ್​.ಎನ್. ರವಿ ಅವರಿಗೆ ಡಿಎಂಕೆ ಕಾರ್ಯಕರ್ತರೊಬ್ಬರು ನಿಂದನೀಯವಾಗಿ ಮಾತನಾಡಿದ್ದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಅಂಬೇಡ್ಕರ್ ಹೆಸರು ಉಲ್ಲೇಖಿಸಲು ಆಗದಿದ್ದರೆ ನೀವು ಕಾಶ್ಮೀರಕ್ಕೆ ಹೋಗಿ. ಅಲ್ಲಿಗೆ ನಿಮ್ಮನ್ನು ಹತ್ಯೆ ಮಾಡಲು ತೀವ್ರವಾದಿಯನ್ನು ಕಳುಹಿಸುತ್ತೇವೆ ಎಂದು ಡಿಎಂಕೆ ಕಾರ್ಯಕರ್ತ ಶಿವಾಜಿ ಕೃಷ್ಣಮೂರ್ತಿ ಬೆದರಿಕೆ ಹಾಕಿದ್ದಾರೆ.

ಈ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಹೊಸ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಕೂಡ (BJP) ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣವೇ ಕೃಷ್ಣಮೂರ್ತಿಯನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದೆ.
ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಿಂದ ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಮತ್ತಿತರರ ಹೆಸರುಗಳನ್ನು ರಾಜ್ಯಪಾಲರು ಕೈಬಿಟ್ಟಿದ್ದರು ಎನ್ನಲಾಗಿದೆ. ಇದನ್ನು ಡಿಎಂಕೆ ಮತ್ತು ಆಡಳಿತಾರೂಢ ಮಿತ್ರಪಕ್ಷಗಳು ಖಂಡಿಸಿವೆ. ರಾಜ್ಯಪಾಲರ ನಿವಾಸದ ಎದುರು ಪ್ರತಿಭಟನೆಯನ್ನೂ ನಡೆಸಿವೆ.

ಇತ್ತ ರಾಜ್ಯಪಾಲರ ಬಗ್ಗೆ ಶಿವಾಜಿ ಕೃಷ್ಣಮೂರ್ತಿ ನೀಡಿರುವ ಹೇಳಿಕೆಯಿಂದ ಡಿಎಂಕೆ ಅಂತರ ಕಾಯ್ದುಕೊಂಡಿದೆ. ನಮ್ಮ ಪಕ್ಷವು ರಾಜ್ಯಪಾಲರನ್ನು ಗೌರವಿಸುತ್ತದೆ. ದ್ವೇಷದಿಂದ ಕೂಡಿದ ಹೇಳಿಕೆಯು ವೈಯಕ್ತಿಕವಾದದ್ದೇ ವಿನಃ ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಡಿಎಂಕೆ ಹೇಳಿದೆ.
ಶಿವಾಜಿ ಕೃಷ್ಣಮೂರ್ತಿ ಹೇಳಿಕೆಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಖಂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!