ಒಂದಿನ ಅವನ ಮುಂದೆ ದೇವರು ಪ್ರತ್ಯಕ್ಷವಾಗಿ ಫಳಫಳ ಹೊಳೆಯುವ ಕಲ್ಲೊಂದನ್ನು ಕೊಟ್ಟನಂತೆ, ಇದರ ಬೆಲೆ ಏನು ಅಂತ ತಿಳಿದುಕೊಂಡು ಬಾ ಎಂದರಂತೆ. ದೇವರು ಅಂದಮೇಲೆ ಇಷ್ಟು ಸುಲಭವಾದ ಪ್ರಶ್ನೆ ಹಾಕೋಕೆ ಸಾಧ್ಯವಾ? ಅಲ್ಲಿಯೂ ಒಂದು ಟ್ವಿಸ್ಟ್ ಇತ್ತಂತೆ, ಭಗವಂತ ಹೇಳಿದ ‘ಬೆಲೆ ತಿಳಿದುಕೊಂಡು ಬಾ ಆದರೆ ಕಲ್ಲನ್ನು ಯಾರಿಗೂ ಮಾರುವಂತಿಲ್ಲ!’
ಸರಿ ಅಂತ ಆತ ಹೊರಟು ಸೀದ ಕಿತ್ತಳೆ ಹಣ್ಣಿನ ಅಂಗಡಿ ಬಳಿ ಬಂದ, ‘ಅಣ್ಣಾ ಈ ಕಲ್ಲು ಕೊಡ್ತೀನಿ ನಂಗೆ ಏನು ಕೊಡ್ತೀರಾ?’ ಎಂದು ಕೇಳಿದ. ಫಳಫಳ ಕಲ್ಲನ್ನು ನೋಡಿದ ಮಾರಾಟಗಾರ ಇದೇನೋ ಸ್ಪೆಶಲ್ ಆಗಿದೆ ಅಂತ ’10 ಕಿತ್ತಳೆ ಹಣ್ಣು ತಗೊಂಡು ಕಲ್ಲು ಕೊಡಿ’ ಎಂದು ಹೇಳಿದ.
ಆಗ ಈತ ಇಲ್ಲ ನಾನು ಮಾರೋದಿಲ್ಲ, ಬೆಲೆ ತಿಳಿದುಕೊಳ್ತಿದ್ದೆ ಅಷ್ಟೆ ಅಂದ. ನಂತರ ಬಟ್ಟೆ ಅಂಗಡಿಗೆ ಹೋದ, ‘ಅಣ್ಣ ಈ ಕಲ್ಲು ಕೊಡ್ತೀನಿ ಏನು ಕೊಡ್ತೀರ?’ ಎಂದು ಕೇಳಿದ. ಅದಕ್ಕೆ ಅಂಗಡಿ ಮಾಲೀಕ ‘ಎರಡು ಜೊತೆ ಪ್ಯಾಂಟ್, ಎರಡು ಜೊತೆ ಶರ್ಟ್ ತೆಗೆದುಕೊಂಡು ಕಲ್ಲು ಕೊಡು’ ಎಂದ. ಅವನಿಗೂ ತನ್ನ ಕಥೆ ವಿವರಿಸಿ ಹೊರಟು ಹೋದ.
ಇದೀಗ ಬಂಗಾರದ ಅಂಗಡಿಗೆ ಬಂದು ಕಲ್ಲನ್ನು ಕೊಟ್ಟು ಇದರ ಬೆಲೆ ಹೇಳಿ ಅಂದ. ಬಂಗಾರದ ಅಂಗಡಿಯವರು ಕಲ್ಲನ್ನು ಒಳಗೆ ತೆಗದುಕೊಂಡು ಹೋಗಿ, ಟೀಂ ಮೀಟಿಂಗ್ ಮಾಡಿದ್ರು, ಆ ಕಲ್ಲಿಗೆ 50 ಲಕ್ಷ ರೂಪಾಯಿ ಕೊಡ್ತೀವಿ ಎಂದು ಹೇಳಿದ. ಈತನಿಗೆ ಶಾಕ್ ಆಗೋಯ್ತು ಈ ಕಲ್ಲಿಗೆ ಇಷ್ಟೊಂದು ದುಡ್ಡಾ ಎಂದುಕೊಂಡ.
ನಂತರ ಆಂಟಿಕ್ ಶಾಪ್ ಒಂದಕ್ಕೆ ತೆರಳಿದ. ಅಲ್ಲಿ ಈ ಕಲ್ಲನ್ನು ಸೂಕ್ಷ್ಮವಾಗಿ ನೋಡಿ ಅಂಗಡಿಯಾತ, ನಾನು ಇದನ್ನು ಕೊಳ್ಳೋದಿಲ್ಲ, ಏಕೆಂದರೆ ಇದಕ್ಕೆ ಬೆಲೆ ಕಟ್ಟೋಕೆ ಆಗೋದಿಲ್ಲ, ಅಷ್ಟು ಅಪರೂಪದ ಕಲ್ಲಿದು ಎಂದು ಹೇಳಿದ.
ಸೀದ ದೇವರ ಬಳಿ ಬಂದು, ನಡೆದಿದ್ದನ್ನು ವಿವರಿಸಿದ, ಕಲ್ಲಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ ಎಂದು ಹೇಳಿದ. ಅದಕ್ಕೆ ದೇವರು ಹೇಳಿದರು ‘ಈ ಕಲ್ಲು ಹಾಗೂ ನೀನು ಒಂದೇ!!’
ಹೌದು, ನಿನ್ನ ಜೀವನಕ್ಕೂ ಬೆಲೆ ಕಟ್ಟೋಕೆ ಆಗೋದಿಲ್ಲ. ಜನರು ನಿನ್ನ ಬೆಲೆಯನ್ನು ಲೆಕ್ಕ ಹಾಕೋದು ಅವರವರ ಅನುಭವದ ಮೇಲೆ. ಹಣ್ಣಿನ ವ್ಯಾಪಾರಿಗೇನು ಗೊತ್ತಿತ್ತು, ಇದು ಇಷ್ಟೊಂದು ಬೆಲೆಬಾಳುವ ವಸ್ತು ಎಂದು. ಹಾಗೆ ನಿನ್ನ ಜೀವನವೂ ಅಷ್ಟೆ ಒಬ್ಬೊಬ್ಬರು ಒಂದೊಂದು ರೀತಿ ಬೆಲೆ ಕಟ್ಟಿದರೂ ನೀನು ಬೆಲೆಯೇ ಕಟ್ಟಲಾಗದವನು ಎಂದು ನಂಬಬೇಕು ಎಂದು ಹೇಳಿದರು.
ಹೌದಲ್ವಾ? ಯಾರೋ ನಮ್ಮನ್ನು ಏನೇನೋ ಹೇಳ್ತಾರೆ? ನೋಯಿಸ್ತಾರೆ, ಬೆಲೆ ಕೂಡ ಕಟ್ತಾರೆ, ಆದರೆ ಅದು ನಿಮ್ಮ ತಪ್ಪಲ್ಲ. ಅವರವರ ಬುದ್ಧಿಶಕ್ತಿಗೆ ತಕ್ಕಂತೆ ನಿಮ್ಮನ್ನು ಅಳೆಯುತ್ತಾರೆ. ನೀವೆಂಥ ವಜ್ರ ಎಂದು ನಿಮಗೆ ಗೊತ್ತಿದ್ರೆ ಸಾಕಲ್ವಾ?