ಗೋಧ್ರಾ ದುರಂತ ದೇಶದ ಅತಿದೊಡ್ಡ ಗಲಭೆಯಲ್ಲ: ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್ : 

ಅಮೆರಿಕದ ಸಂಶೋಧಕ ವಿಜ್ಞಾನಿ ಹಾಗೂ ಖ್ಯಾತ ಪೋಡ್​​ಕ್ಯಾಸ್ಟರ್ ಆದ ಲೆಕ್ಸ್ ಫ್ರೀಡ್​​ಮ್ಯಾನ್ ಅವರೊಂದಿಗೆ ನಡೆದ ಸುದೀರ್ಘ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಗುಜರಾತ್‌ನಲ್ಲಿ ನಡೆದ ಗಲಭೆಗಳು, ಹಿಂಸಾಚಾರದ ಘಟನೆಗಳು, ವ್ಯಾಪಕ ಟೀಕೆಗಳು ಮತ್ತು ಅವುಗಳನ್ನು ಎದುರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

2002ರ ಫೆ.27ರಂದು ನಡೆದ ಗುಜರಾತ್‌ ಗಲಭೆಯೇ ದೇಶದ ಅತಿದೊಡ್ಡ ಗಲಭೆ ಎಂದು ಬಿಂಬಿಸಲಾಗುತ್ತಿದೆ. ಆದ್ರೆ ಅದಕ್ಕಿಂತಲೂ ಹಿಂದೆ 250ಕ್ಕೂ ಹೆಚ್ಚು ದೊಡ್ಡ ದೊಡ್ಡ ಗಲಭೆಗಳು ನಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ಗಲಭೆಗೆ ಮುಂಚಿನ ಗುಜರಾತ್​ ಮತ್ತು ನಂತರದ ಗುಜರಾತ್ ಹೇಗಿತ್ತು ಎಂಬುವುದನ್ನು ಪ್ರಧಾನಿ ಮೋದಿ ವಿವರಿಸಿದ್ದು, 2002ರ ನಂತರ, 22 ವರ್ಷಗಳಲ್ಲಿ ಗುಜರಾತ್‌ನಲ್ಲಿ ಒಂದೇ ಒಂದು ದೊಡ್ಡ ಗಲಭೆ ನಡೆದಿಲ್ಲ. ಹಾಗಾಗಿ ಗುಜರಾತ್ ಸಂಪೂರ್ಣವಾಗಿ ಶಾಂತಿಯುತವಾಗಿದೆ ಎಂದು ಹೇಳಿದ್ದಾರೆ.

ಆ ಸಮಯದಲ್ಲಿ, ವಿಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರು. ಸ್ವಾಭಾವಿಕವಾಗಿ ಅವರು ನಮ್ಮ ಮೇಲಿನ ಎಲ್ಲಾ ಆರೋಪಗಳು ಹಾಗೆಯೇ ಇರಬೇಕೆಂದು ಬಯಸಿದ್ದರು. ಅವರ ಅವಿರತ ಪ್ರಯತ್ನಗಳ ಹೊರತಾಗಿಯೂ, ನ್ಯಾಯಾಂಗವು ಪರಿಸ್ಥಿತಿಯನ್ನು ಎರಡು ಬಾರಿ ಸೂಕ್ಷ್ಮವಾಗಿ ಅಲೋಕಿಸಿ, ಅಂತಿಮವಾಗಿ ನಾವು ಸಂಪೂರ್ಣವಾಗಿ ನಿರಪರಾಧಿಗಳು ಎಂದು ಘೋಷಿಸಿತು. ನಿಜವಾಗಿಯೂ ಜವಾಬ್ದಾರರಾಗಿರುವವರು ನ್ಯಾಯಾಲಯದಿಂದ ನ್ಯಾಯವನ್ನು ಎದುರು ನೋಡುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

2002 ಫೆಬ್ರವರಿ 24ರಂದು, ನಾನು ಮೊದಲ ಬಾರಿಗೆ ಶಾಸಕನಾದೆ. ಫೆಬ್ರವರಿ 24, 25, ಅಥವಾ 26 ರ ಸುಮಾರಿಗೆ ನಾನು ಮೊದಲ ಬಾರಿಗೆ ಗುಜರಾತ್ ವಿಧಾನಸಭೆಗೆ ಕಾಲಿಟ್ಟೆ. 2002 ಫೆಬ್ರವರಿ 27 ರಂದು, ನಾವು ಬಜೆಟ್ ಅಧಿವೇಶನಕ್ಕಾಗಿ ವಿಧಾನಸಭೆಯಲ್ಲಿ ಕುಳಿತಿದ್ದೆವು. ನಾನು ರಾಜ್ಯ ಪ್ರತಿನಿಧಿಯಾಗಿ ಕೇವಲ ಮೂರು ದಿನವಾಗಿತ್ತು. ಆಗ ಇದ್ದಕ್ಕಿದ್ದಂತೆ ಭಯಾನಕ ಗೋಧ್ರಾ ಘಟನೆ ಸಂಭವಿಸಿತು. ಇದು ಊಹಿಸಲಾಗದಷ್ಟು ದೊಡ್ಡ ದುರಂತವಾಗಿತ್ತು. ಜನರನ್ನು ಜೀವಂತವಾಗಿ ಸುಟ್ಟುಹಾಕಲಾಗಿತ್ತು. ಪರಿಸ್ಥಿತಿ ಎಷ್ಟು ಉದ್ವಿಗ್ನ ಮತ್ತು ಅಸ್ಥಿರವಾಗಿತ್ತು ಎಂಬುದನ್ನು ನೀವು ಊಹಿಸಬಹುದು. ಮಹಿಳೆಯರು, ಮಕ್ಕಳೆಂಬುದನ್ನು ನೋಡದೇ ಸುಮಾರು 59 ಮಂದಿಯನ್ನ ರೈಲಿನಲ್ಲೇ ಸಜೀವ ದಹನ ಮಾಡಲಾಗಿತ್ತು. ಇದು ಯಾರೂ ಊಹಿಸಲಾದ ದುರಂತ ಎಂದು ಸ್ಮರಿಸಿದರು.

ಗೋಧ್ರಾ ದುರಂತ ಸೇರಿದಂತೆ ಇನ್ನು ಕೆಲ ದುರಂತಗಳನ್ನು ಇದುವರೆಗಿನ ಅತಿದೊಡ್ಡ ಗಲಭೆಗಳು ಎಂಬ ಗ್ರಹಿಕೆ ವಾಸ್ತವವಾಗಿ ತಪ್ಪು ಕಲ್ಪನೆಯಾಗಿದೆ. 2002 ಕ್ಕಿಂತ ಹಿಂದಿನ ಅಂಕಿಅಂಶಗಳನ್ನು ನೀವು ಪರಿಶೀಲಿಸಿದರೆ, ಗುಜರಾತ್​ ಆಗಾಗ ಗಲಭೆಗಳನ್ನು ಎದುರಿಸಿದೆ. ಎಲ್ಲೋ ಒಂದು ಕಡೆ ಕರ್ಫ್ಯೂ ವಿಧಿಸಲಾಗುತ್ತಿತ್ತು. ಗಾಳಿಪಟ ಹಾರಿಸುವ ಸ್ಪರ್ಧೆಗಳು ಅಥವಾ ಕ್ಷುಲ್ಲಕ ವಿಚಾರಗಳಿಗೆ ಕೋಮು ಹಿಂಸಾಚಾರ ಭುಗಿಲೆದ್ದಿರಬಹುದು. 2002 ಕ್ಕಿಂತ ಮೊದಲು ಗುಜರಾತ್ 250ಕ್ಕೂ ಹೆಚ್ಚು ಮಹತ್ವದ ಗಲಭೆಗಳಿಗೆ ಸಾಕ್ಷಿಯಾಗಿತ್ತು. 1969 ರಲ್ಲಿ ನಡೆದ ಗಲಭೆಗಳು ಸುಮಾರು ಆರು ತಿಂಗಳು ಕಾಲ ಪ್ರಚಲಿತವಾಗಿದ್ದವು ಎಂದರು.

ನಾವು ತುಷ್ಟೀಕರಣ ರಾಜಕೀಯದಿಂದ ಆಕಾಂಕ್ಷೆಯ ರಾಜಕೀಯಕ್ಕೆ ಬದಲಾಯಿಸಿದ್ದೇವೆ. ಇದರಿಂದಾಗಿ ಅಭಿವೃದ್ಧಿ ಬಯಸುವ ಯಾರಾದರೂ ನಮ್ಮೊಂದಿಗೆ ಸ್ವಇಚ್ಛೆಯಿಂದ ಜೊತೆಗೂಡುತ್ತಾರೆ. ಗುಜರಾತ್ ಅನ್ನು ಉತ್ತಮವಾಗಿ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಪರಿವರ್ತಿಸಲು ನಾವು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಗುಜರಾತ್​​ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

2002ರ ನಂತರ ಕಳೆದ 22 ವರ್ಷಗಳಲ್ಲಿ ಯಾವುದೇ ದೊಡ್ಡ ಗಲಭೆಗಳು ಗುಜರಾತ್‌ನಲ್ಲಿ ನಡೆದಿಲ್ಲ. ಅಭಿವೃದ್ಧಿಯತ್ತ ಗಮನಹರಿಸುವುದು ನಮ್ಮ ಸರ್ಕಾರದ ಮಂತ್ರವಾಗಿದೆ. ನಾವು ತುಷ್ಟೀಕರಣ ರಾಜಕೀಯದಿಂದ ದೂರವಿರುವ ಕಾರಣ ಇಡೀ ರಾಜ್ಯ ಶಾಂತಿಯುತವಾಗಿದೆ. ಈಗ ಗುಜರಾತ್‌ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರಮಿಸುತ್ತಿದೆ ಎಂದು ಮೋದಿ ಶ್ಲಾಘಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!