ನಿವೇಶನ ಹಂಚಿಕೆಯಲ್ಲಿಗೋಲ್ ಮಾಲ್: ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು

ಹೊಸದಿಗಂತ ವರದಿ, ಮೈಸೂರು:

ಇಲ್ಲಿನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಸಾವಿರಾರು ಕೋಟಿ ನಿವೇಶನ ಹಂಚಿಕೆ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಗುರುವಾರ ಮುಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ನಗರದ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು, ಬಳಿಕ ಪ್ರತಿಭಟನಾ ಮೆರವಣಿಗೆಯ ಮೂಲಕ ಮುಡಾ ಕಚೇರಿಗೆ ಸಾಗುತ್ತಿದ್ದಾಗ, ರಾಮಸ್ವಾಮಿ ವೃತ್ತದ ಸಮೀಪವಿರುವ ಮಹಾರಾಜ ಹೋಟೆಲ್ ಬಳಿ ಪೊಲೀಸರು ತಡೆದರು. ಈ ವೇಳೆ ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ಉಂಟಾಯಿತು. ಮುಡಾ ಕಚೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳಲು ಅವಕಾಶ ಕೊಡಿ ಎಂದು ಪ್ರತಿಭಟನಾಕಾರರು ಕೇಳಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಇಲಾಖೆಯ ಸಚಿವರು, ಮುಡಾದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ೪,೦೦೦ ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ಮಾಡಿ ತಿಂದು ತೇಗಿದ “ಕಾಂಗ್ರೆಸ್ ರಾಜ್ಯ ಸರ್ಕಾರವನ್ನು ಈ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ರನ್ನು ಕೂಡಲೇ ಅಧಿಕಾರದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್, ಮುಡಾದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಭಾರೀ ಅಕ್ರಮವೆಸಗಲಾಗಿದೆ. ಬಡವರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಬಡವರಿಗೆ ಸೇರಬೇಕಾದ ನಿವೇಶಗಳನ್ನು ಬಲಾಢ್ಯರಿಗೆ ನೀಡಿದೆ. ೫೦:೫೦ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮವೆಸಗಿದ್ದು, ಕಾನೂನುಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಪ್ರಾಧಿಕಾರಕ್ಕೆ ೪ ಸಾವಿರ ಕೋಟಿಗೂ ಅಧಿಕ ಹಣ ನಷ್ಟವಾಗಿದೆ. ಸರ್ಕಾರ ಹಗರಣದಲ್ಲಿ ಭಾಗಿಯಾದವರನ್ನು ರಕ್ಷಿಸಲು ಹೊರಟಿದ್ದು, ಕೂಡಲೇ ಸಂಬoಧಿಸಿದ ಎಲ್ಲಾ ಅಧಿಕಾರಿಗಳನ್ನು ಅಮಾನತು ಮಾಡಿ, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ನಗಗರಾಭಿವೃದ್ಧಿ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ದಲಿತ ವಿರೋಧಿ ಕೆಲಸ ಮಾಡುತ್ತಿದೆ. ಸಂವಿಧಾನದ ವಿಚಾರವಿಟ್ಟುಕೊಂಡು ಬಿಜೆಪಿ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ. ಹಾಲು, ಇಂಧನ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಕಿಡಿ ಕಾರಿದರು.

ಬಳಿಕ ಪ್ರತಿಭಟನಾಕಾರರು ಮುಡಾಗೆ ಮುತ್ತಿಗೆ ಹಾಕುವುದಕ್ಕೆ ಹೋಗಲು ಯತ್ನಿಸಿದಾಗ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ಬಂಧಿಸಿ, ಬಲವಂತವಾಗಿ ವಾಹನಕ್ಕೆ ಹಾಕಿಕೊಂಡು ಕರೆದೊಯ್ದರು.

ಮೈಸೂರು ನಗರ ಹಾಗೂ ಗ್ರಾಮಾಂತರ ಯುವ ಮೋರ್ಚಾ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ನಗರ ಉಪಾಧ್ಯಕ್ಷ ಜೋಗಿ ಮಂಜು, ನಗರ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು,ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಸಾಮ್ರಾಟ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಡಿ ಲೋಹಿತ್, ಮಧುರಾಜ್, ನಗರ ಉಪಾಧ್ಯಕ್ಷರಾದ ವೇದ ರಾಜ್, ಟಿ ರಮೇಶ್, ರುದ್ರಮೂರ್ತಿ, ಜೋಗಿ ಮಂಜು, ನಗರ ಪಾಲಿಕೆ ಸದಸ್ಯರಾದ ಬಿವಿ ಮಂಜುನಾಥ್, ಸೌಮ್ಯ ಉಮೇಶ್, ರಾಜ್ಯ ಯುವ ಮೋರ್ಚಾ ಯೋಜನೆ ಹಾಗೂ ಸಂಶೋಧನೆ ಸಂಚಾಲಕರಾದ ಪ್ರಣಯ್, ನಗರ ಉಪಾಧ್ಯಕ್ಷರಾದ ಮನು ಅಪ್ಪಿ, ಉಮೇಶ್, ದರ್ಶನ್ ಯದುರಾಜ್, ಕೀರ್ತೇಶ್, ಮಂಡಲಗಳ ಅಧ್ಯಕ್ಷರಾದ ನಿಶಾಂತ್, ಅರ್ಜುನ್, ಮೋಹನ್, ನವೀನ್, ಮಧು,ಹಾಗೂ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಮಸ್ವಾಮಿ ವೃತ್ತದಿಂದ ಮುಡಾ ಕಚೇರಿಗೆ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!