ರಾಜ್ಯ ಪೊಲೀಸ್ ಇಲಾಖೆಗೆ ಸುವರ್ಣ ಮಹೋತ್ಸವದ ಸಂಭ್ರಮ: ಮಾ. 10 ರಂದು ‘ಫಿಟ್ನೆಸ್ ಫಾರ್ ಆಲ್’ ಓಟ!

ಹೊಸದಿಗಂತ ವರದಿ, ಬೆಂಗಳೂರು

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ತನ್ನ 50ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ರಚನಾತ್ಮಕ ಚಟುವಟಿಕೆಗಳನ್ನು ಸ್ಮರಣೀಯ ಕಾರ್ಯಕ್ರಮಗಳ ಮೂಲಕ ಚಿನ್ನದ ಹಬ್ಬ ಆಚರಣೆಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ.

“ಮಾದಕ ವಸ್ತು ಮುಕ್ತ ಕರ್ನಾಟಕ” ನಿರ್ಮಾಣ ಮಾಡುವ ಸದಾಶಯದೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸಹಯೋಗದಲ್ಲಿ “ಫಿಟ್ನೆಸ್ ಫಾರ್ ಆಲ್” 5 ಕಿ.ಮೀ ಮತ್ತು 10 ಕಿ.ಮೀ ಓಟವನ್ನು ಆಯೋಜಿಸಲಾಗುತ್ತಿದೆ. ಓಟದಲ್ಲಿ ಎಲ್ಲಾ ವಯೋಮಾನದವರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದು, ಈಗಾಗಲೇ ನೋಂದಣಿ ಕಾರ್ಯ ಪ್ರಾರಂಭವಾಗಿದೆ. ಬೆಂಗಳೂರು ನಗರ, ರಾಜ್ಯದ ವಿವಿಧ ಭಾಗಗಳು, ರಾಷ್ಟ್ರದಾದ್ಯಂತ ಎಲ್ಲಾ ವಯೋಮಾನದ ಸರಿ ಸುಮಾರು 10,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದಿಂದ ಓಟ ಪ್ರಾರಂಭವಾಗಿ, ಹಸಿರು ಹೊದಿಕೆಯ ಕಬ್ಬನ್ ಉದ್ಯಾನವನದ ಮುಖಾಂತರವಾಗಿ ಮತ್ತೆ ವಿಧಾನಸೌಧದ ಮುಂಭಾಗದಲ್ಲಿ ಮುಕ್ತಾಯಗೊಳ್ಳಲಿದೆ. ಈ ಓಟವು ಹಸಿರು ಬೆಂಗಳೂರು, ಮಾದಕ ವಸ್ತು ಮುಕ್ತ ಕರ್ನಾಟಕ ಮತ್ತು ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸಲಿದೆ. ಈ ಓಟವು ನಾಗರೀಕರನ್ನು ಆರೋಗ್ಯಕರ ಜೀವನಕ್ಕೆ ಹೊಂದಿಕೊಳ್ಳುವಂತೆ ಅರಿವು ಮೂಡಿಸಿ ಉತ್ತೇಜಿಸುವ ಗುರಿ ಹೊಂದಿದೆ.

ಓಟಗಾರರು ಹಾದುಹೋಗುವ ಆಯ್ದ ಸ್ಥಳಗಳಲ್ಲಿ ಕರ್ನಾಟಕದ ರಾಜ್ಯದ ಹೆಮ್ಮೆಯ ಪೊಲೀಸ್ ಬ್ಯಾಂಡ್ ತಂಡದ ಸಮುಧುರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೊನೆಯಲ್ಲಿ ಕರ್ನಾಟಕ ಪೊಲೀಸ್ ಮೌಂಟೆಡ್ ಕಂಪನಿಯ ಕುದುರೆಗಳು ಭಾಗವಹಿಸಲಿದ್ದು, ಓಟವನ್ನು ಹೆಚ್ಚು ಆಕರ್ಷಣಿಯವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅತ್ಯುತ್ತಮ ಓಟಗಾರರು ಸಹ ಈ ಓಟದಲ್ಲಿ ಭಾಗವಹಿಸಲಿದ್ದಾರೆ.

ಈ ಓಟವು 5 ಕಿ.ಮೀ ಮತ್ತು 10 ಕಿ.ಮೀ.ನ ಪ್ರತಿಯೊಂದು ಮೂರು ವಿಭಿನ್ನ ವಿಭಾಗಗಳನ್ನು ಒಳಗೊಂಡಿದ್ದು ಒಟ್ಟು ರೂ. 18 ಲಕ್ಷಕ್ಕೂ ಹೆಚ್ಚಿನ ಮೊತ್ತದ ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. 10 ಕಿ.ಮೀ ಓಟದ ವಿಜೇತರಿಗೆ ಪ್ರಥಮ ಬಹುಮಾನ ರೂ. 1.00 ಲಕ್ಷಗಳನ್ನು ಪುರುಷ ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ 3 ವಿಭಿನ್ನ ವಿಭಾಗಗಳ ಅಡಿಯಲ್ಲಿ ನೀಡಲಾಗುವುದು.

ಸಮಯ ನಿಗದಿತ 5 ಕಿ.ಮೀ ಓಟಕ್ಕೆ ಪ್ರಥಮ ಬಹುಮಾನ ರೂ. 40,000 ಗಳನ್ನು ಪುರುಷ ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ 3 ವಿಭಿನ್ನ ವಿಭಾಗಗಳ ಅಡಿಯಲ್ಲಿ ನೀಡಲಾಗುವುದು. ಅಲ್ಲದೇ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 10 ಕಿಮೀ ಓಟವನ್ನು ಮೊದಲು ಪೂರ್ಣಗೊಳಿಸುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ರೂ.50,000 ನಗದು ಬಹುಮಾನದ ಜೊತೆಗೆ “ಡಿಜಿಪಿ ಕರ್ನಾಟಕ ಕಪ್” ಪಾರಿತೋಷಕ ನೀಡಿ ಗೌರವಿಸಲಾಗುವುದು. 10ಕಿ.ಮೀ ಓಟದಲ್ಲಿ ಮೊದಲಿಗರಾಗುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ರೂ.1,50,000ಗಳ ಬಹುಮಾನ ನೀಡಲಾಗುವುದು.

ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಓಟದಲ್ಲಿ ಹಿರಿಯ ನಾಗರೀಕರು ವಿಶೇಷ ಸಾಮಾರ್ಥ್ಯವುಳ್ಳ ಉತ್ಸಾಹಿಗಳು, ಹವ್ಯಾಸಿ ಮತ್ತು ವೃತ್ತಿಪರ ಓಟಗಾರರ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಇದೇ ರೀತಿಯ ಓಟಗಳನ್ನು ರಾಜ್ಯದ ಎಲ್ಲಾ ಜಿಲ್ಲೆ ಮತ್ತು ನಗರಗಳಲ್ಲಿ ಆಯೋಜಿಸಲಾಗಿದೆ.

ಈ ಓಟದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದ್ದು, ಒಂದು ಟಿ-ಶರ್ಟ್, ಓಟವನ್ನು ಪೂರ್ಣಗೊಳಿಸುವವರಿಗೆ ಪದಕ ಮತ್ತು ಮಾಡಲಾಗಿರುತ್ತದೆ. ಆಸಕ್ತರು www.click2race.com ವೆಬ್ಸೈಟ್ ಮುಖಾಂತರ ಹೆಸರು ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!