ಹೊಸದಿಗಂತ ಡಿಜಿಟಲ್ ಡೆಸ್ಕ್ :
ಗುಡ್ ಫ್ರೈಡೆ ಕ್ರಿಶ್ಚಿಯನ್ ಧರ್ಮದವರಿಗೆ ವಿಶೇಷ ದಿನವಾಗಿದೆ. ಗುಡ್ ಫ್ರೈಡೆಯನ್ನು ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಗ್ರೇಟ್ ಫ್ರೈಡೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ಲಾರ್ಡ್ ಜೀಸಸ್ ಕ್ರೈಸ್ಟ್ ಅನೇಕ ಚಿತ್ರಹಿಂಸೆಗಳ ನಂತರ ಶಿಲುಬೆಗೇರಿಸಲಾಯಿತು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಕ್ರಿಶ್ಚಿಯನ್ ಧರ್ಮದ ಜನರು ಗುಡ್ ಫ್ರೈಡೆಯ ದಿನವನ್ನು ಲಾರ್ಡ್ ಜೀಸಸ್‌ನ ತ್ಯಾಗದ ದಿನವೆಂದು ನೆನಪಿಸಿಕೊಳ್ಳುತ್ತಾರೆ.
ಈ ದಿನ ಜನರು ಚರ್ಚ್‌ಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಯೇಸುವಿನ ಸ್ಮರಣೆಯಲ್ಲಿ ಜನರು ಉಪವಾಸ ಮಾಡುತ್ತಾರೆ.ಸಿಹಿ ತಿನಿಸು ತಯಾರಿಸುತ್ತಾರೆ ಮತ್ತು ಹಂಚುತ್ತಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಗುಡ್ ಫ್ರೈಡೆ ಬರುತ್ತದೆ. ಈ ವರ್ಷದ ಗುಡ್ ಫ್ರೈಡೆ ಯಾವಾಗ, ಅದರ ಇತಿಹಾಸವೇನು, ಮಹತ್ವ ಮತ್ತು ವಿಶೇಷತೆ ಕುರಿತು ತಿಳಿಯೋಣ.
ಶುಭ ಶುಕ್ರವಾರ 2023 ಯಾವಾಗ?
ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಪ್ರತಿ ವರ್ಷ ಗುಡ್ ಫ್ರೈಡೆ ಬರುತ್ತದೆ. ಈ ವರ್ಷದ ಈಸ್ಟರ್ ಭಾನುವಾರ ಏಪ್ರಿಲ್ 09 ರಂದು. ಹೀಗಾಗಿ ಇಂದು (ಏಪ್ರಿಲ್ 07) ಗುಡ್ ಫ್ರೈಡೆಯನ್ನು ಆಚರಿಸಲಾಗುತ್ತದೆ.
ಗುಡ್ ಫ್ರೈಡೆ ಇತಿಹಾಸ
ಲಾರ್ಡ್ ಜೀಸಸ್ ಕ್ರೈಸ್ಟ್ ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದ್ದರು. ಜಗತ್ತಿಗೆ ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದ ಜೀಸಸ್ ಅನ್ನು ಅಂದಿನ ಧಾರ್ಮಿಕ ಮೂಲಭೂತವಾದಿಗಳು ರೋಮ್ ಆಡಳಿತಗಾರನಿಗೆ ದೂರು ನೀಡಿ ಶಿಲುಬೆಯಲ್ಲಿ ನೇಣು ಹಾಕಿದರು. ಇದೇ ಕಾರಣಕ್ಕೆ ಕ್ರೈಸ್ತ ಧರ್ಮದಲ್ಲಿ ನಂಬಿಕೆ ಇರುವವರು ಗುಡ್ ಫ್ರೈಡೆಯನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ. ಆದರೆ ಈ ಘಟನೆಯ ಮೂರು ದಿನಗಳ ನಂತರ ಅಂದರೆ ಈಸ್ಟರ್ ಭಾನುವಾರದಂದು ಜೀಸಸ್ ಪುನರುತ್ಥಾನಗೊಂಡರು ಎಂದು ಹೇಳಲಾಗುತ್ತದೆ.
ಗುಡ್ ಫ್ರೈಡೆ ದಿನದ ಮಹತ್ವ
ಕ್ರಿಶ್ಚಿಯನ್ ಜನರಲ್ಲಿ ಗುಡ್ ಫ್ರೈಡೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ, ಏಕೆಂದರೆ ಈ ದಿನವೇ ಯೇಸು ಕ್ರಿಸ್ತನು ಪಾಪಿಗಳ ಉಪಶಮನಕ್ಕಾಗಿ ಶಿಲುಬೆಯ ಮೇಲೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾನೆ ಎಂದು ನಂಬಲಾಗಿದೆ. ಮಾನವೀಯತೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಯೇಸು ಕ್ರಿಸ್ತನನ್ನು ಈ ದಿನ ಕ್ರೈಸ್ತರು ಸ್ಮರಿಸುತ್ತಾರೆ
ಗುಡ್ ಫ್ರೈಡೆ ಆಚರಣೆ ಹೇಗಿರತ್ತೆ ?
ಕ್ರೈಸ್ತ ಧರ್ಮದ ಜನರು ಗುಡ್ ಫ್ರೈಡೆಯಂದು ಲಾರ್ಡ್ ಜೀಸಸ್‌ನ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ದಿನ ಚರ್ಚುಗಳಲ್ಲಿ ಗಂಟೆಗಳನ್ನು ಬಾರಿಸುವುದಿಲ್ಲ. ಅಲ್ಲದೆ ಜನರು ಚರ್ಚ್‌ನಲ್ಲಿ ಶಿಲುಬೆಗೆ ಮುತ್ತಿಡುವ ಮೂಲಕ ಪ್ರಭು ಯೇಸುವನ್ನು ಸ್ಮರಿಸುತ್ತಾರೆ. ಜನರು ಲಾರ್ಡ್ ಜೀಸಸ್‌ನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ತಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಲಾರ್ಡ್ ಜೀಸಸ್ ಹೇಳಿದ ಪ್ರೀತಿ, ಸತ್ಯ ಮತ್ತು ನಂಬಿಕೆಯ ಮಾರ್ಗವನ್ನು ಜೀವನದುದ್ದಕ್ಕೂ ಅನುಸರಿಸುತ್ತೇವೆಂದು ಜನರು ಪ್ರಮಾಣ ಮಾಡುತ್ತಾರೆ.