ಶಬರಿಮಲೆ ಯಾತ್ರೆ ಹೊರಟ ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ಭಾರತೀಯ ರೈಲ್ವೇಯಿಂದ ವಿಶೇಷ ಪ್ಯಾಕೇಜ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೇಶಾದ್ಯಂತ ಇರುವ ಅಯ್ಯಪ್ಪ ಭಕ್ತರು ಶಬರಿಮಲೆಯತ್ತ ಪ್ರಯಾಣ ಆರಂಭಿಸಿದ್ದಾರೆ.ಈ ಹಿನ್ನೆಲೆ ಭಾರತೀಯ ರೈಲ್ವೇ(IRCTC) ಶಬರಿಮಲೆ ಟೂರ್ ಪ್ಯಾಕೇಜ್ ಘೋಷಿಸಿದೆ. ಇದರಿಂದ ಶಬರಿಮಲೆ ಸೇರಿದಂತೆ ಇತರ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಲು ಇಚ್ಚಿಸುವ ಭಕ್ತರಿಗೆ ಉಪಯುಕ್ತ ಪ್ಯಾಕೇಜನ್ನು ಭಾರತೀಯ ರೈಲ್ವೇ ಘೋಷಿಸಿದೆ.

ನವೆಂಬರ್ 16ರಿಂದ ಶಬರಿಮಲೆ ಟೂರ್ ಪ್ಯಾಕೇಜ್ ಆರಂಭಗೊಳ್ಳುತ್ತಿದೆ. ಇದು 4 ರಾತ್ರಿ ಸೇರಿದಂತೆ ಒಟ್ಟು 5 ದಿನಗಳ ಪ್ರಯಾಣ ಪ್ಯಾಕೇಜ್ ಆಗಿದೆ. ಶಬರಿಮಲೆ ದೇವಸ್ಥಾನ ದರುಶನ, ಕೇರಳದ ಮತ್ತೊಂದು ಪ್ರಸಿದ್ಧ ದೇವಾಲಯ ಚೋಟಾನಿಕರ ದೇವಿ ಮಂದಿರ ದರುಶನವೂ ಸೇರಿದೆ. ಒಟ್ಟು 5 ದಿನಗಳ ಈ ಪವಿತ್ರ ದೇಗುಲ ದರುಶನ ಯಾತ್ರೆ ವೇಳೆ ತಂಗಲು ಹೊಟೆಲ್ ವ್ಯವಸ್ಥೆ, ಆಹಾರ ಸೇರಿದಂತೆ ಇತರ ಎಲ್ಲಾ ವ್ಯವಸ್ಥೆಯನ್ನು ಭಾರತೀಯ ರೈಲ್ವೇ ಮಾಡಲಿದೆ.

ಶಬರಿಮಲೆ ಟೂರ್ ಪ್ಯಾಕೇಜ್ ರೈಲು ಒಟ್ಟು 716 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. 460 ಸ್ಲೀಪರ್ ಸೀಟು, 206 3ಎಸಿ ಸೀಟು, 50 2ಎಸಿ ಆಸನ ವ್ಯವಸ್ಥೆ ಇದೆ. ವಿಶೇಷ ಅಂದರೆ ಈ ದೇಗುಲ ಟೂರ್ ಪ್ಯಾಕೇಜ್ ವೇಳೆ ಭಾರತೀಯ ರೈಲ್ವೇ ಸಿಬ್ಬಂದಿಗಳು ಮಾರ್ಗದರ್ಶನ ನೀಡಲಿದ್ದಾರೆ. ಮಂದಿರ ದರುಶನ ಸೇರಿದಂತೆ ಇತರ ವ್ಯವಸ್ಥೆಗಳು ಯಾವುದೇ ಅಡೆ ತಡೆ ಇಲ್ಲದೆ ಸಾಗಲಿದೆ.

ಈ ಟೂರ್ ಪ್ಯಾಕೇಜ್ ಮೂಲಕ ಪ್ರಯಾಣ ಮಾಡುವ ಭಕ್ತರಿಗೆ ವಿಮೆ ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಾಗಲಿದೆ. ರೈಲಿನಲ್ಲಿ ಭಕ್ತರ ಸುರಕ್ಷತೆಗೆ ಭದ್ರತಾ ಸಿಬ್ಬಂದಿಗಳು, ದೇವರ ದರ್ಶನಕ್ಕಾಗಿ ಮಾರ್ಗದರ್ಶಕರು ಹಾಗೂ ಇತರ ಸಿಬ್ಬಂದಿಗಳು, IRCTC ಟೂರ್ ಮ್ಯಾನೇಜರ್ಸ್ ನೆರವು ಸೇರಿದಂತೆ ಇತರ ಸೌಲಭ್ಯಗಳು ಸಿಗಲಿದೆ. ಕೆಲ ಪ್ರದೇಶಗಳ ನಿಲ್ದಾಣಗಳಿಂದ ಶಬರಿಮಲೆ ಟೂರ್ ಪ್ಯಾಕೇಜ್ ರೈಲು ಹೊರಡಲಿದೆ. ಈ ಪೈಕಿ ಸಿಕಂದರಾಬಾದ್‌ನಿಂದ ಶಬರಿಮಲೆ, ಚೋಟಾನಿಕರ ದೇವಿ ದರುಶನ ಟೂರ್ ಪ್ಯಾಕೇಜ್ ರೈಲು ನವೆಂಬರ್ 16ರಿಂದ ಆರಂಭಗೊಳ್ಳಲಿದೆ.

ಶಬರಿಮಲೆ ಟೂರ್ ಪ್ಯಾಕೇಜ್ ಟಿಕೆಟ್ ದರ
ಎಕಾನಮಿ ಕ್ಲಾಸ್: ವಯಸ್ಕರಿಗೆ 11,475 ರೂಪಾಯಿ, ಮಕ್ಕಳಿಗೆ 10,655 ರೂಪಾಯಿ( 5 ರಿಂದ 11 ವರ್ಷದೊಳಗೆ)
ಸ್ಟಾಂಡರ್ಡ್: ವಯಸ್ಕರಿಗೆ 18,790 ರೂಪಾಯಿ, ಮಕ್ಕಳಿಗೆ 17,000 ರೂಪಾಯಿ
ಕಂಫರ್ಟ್: ವಯಸ್ಕರಿಗೆ 24,215 ರೂಪಾಯಿ, ಮಕ್ಕಳಿಗೆ 22,910 ರೂಪಾಯಿ

ಎಕಾನಮಿ ಟಿಕೆಟ್ ಬುಕ್ ಮಾಡುವ ಭಕ್ತರಿಗೆ ಉಳಿದುಕೊಳ್ಳಲು ಎಸಿ ರಹಿತ ಹೊಟೆಲ್ ರೂಂ ಸಿಗಲಿದೆ. ಇನ್ನು ಸ್ಟಾಂಡರ್ಡ್ ಹಾಗೂ ಕಂಫರ್ಟ್ ಟಿಕೆಟ್ ಬುಕ್ ಮಾಡಿದ ಭಕ್ತರಿಗೆ ಎಸಿ ರೂಂ ಲಭ್ಯವಾಗಲಿದೆ. ಇನ್ನು ಪ್ರಯಾಣದ ವೇಳೆ, ಹೊಟೆಲ್‌ಗಳಲ್ಲಿ ಬೆಳಗಿನ ತಿಂಡಿ, ಚಹಾ ಅಥವಾ ಕಾಫಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಗಳು ಇರುತ್ತದೆ. ದೇಗುಲ ಟೂರ್ ಪ್ಯಾಕೇಜ್ ಕಾರಣ ಎಲ್ಲವೂ ಸಸ್ಯಾಹಾರ ಆಹಾರವಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!