ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮೀನು ಪ್ರಿಯರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಮೀನು ಊಟದ ಮನೆಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ಮೀನುಗಾರಿಕಾ ಇಲಾಖೆಯ ವತಿಯಿಂದ ಬೆಂಗಳೂರು ಸೇರಿದಂತೆ ಕೆಲವು ಕಡೆ ಮೀನಿನ ಊಟದ ಹೋಟೆಲ್ಗಳನ್ನು ಈ ಹಿಂದೆ ಸ್ಥಾಪಿಸಲಾಗಿದೆಯಾದರೂ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಖಾಸಗಿ ಸಹಭಾಗಿತ್ವದಡಿ ಮೀನುಗಾರಿಕೆ ಇಲಾಖೆ ರಾಜ್ಯದ ಎಲ್ಲೆಡೆ ಮೀನು ಊಟದ ಮನೆಗಳನ್ನು ಪ್ರಾರಂಭಿಸಲಿದೆ. ಆರಂಭಿಕ ಹಂತದಲ್ಲಿ ಬೆಂಗಳೂರಿನ ಐದು ಕಡೆ ಮೀನುಗಾರಿಕಾ ಇಲಾಖೆಯೇ ಹೊಸ ಮೀನಿನ ಊಟದ ಹೋಟೆಲ್ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೆರೆಗಳಿರುವ ಕಡೆ ಬಿಡಿಎ ಜಾಗ ಒದಗಿಸಲು ಒಪ್ಪಿದೆ ಎಂದರು.