October 7, 2026
Wednesday, October 7, 2026
spot_img

ಮಹೇಶ್ ಬಾಬು ಫ್ಯಾನ್ಸ್‌ಗೆ ಸಿಹಿ ಸುದ್ದಿ: ರಾಜಮೌಳಿ ಬಿಗ್ ಬಜೆಟ್ ಸಿನಿಮಾದ ಶೀರ್ಷಿಕೆ ಗೊಂದಲ ಸುಖಾಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸುತ್ತಿರುವ ಜಾಗತಿಕ ಮಟ್ಟದ ಬಹುನಿರೀಕ್ಷಿತ ಚಿತ್ರಕ್ಕೆ ಎದುರಾಗಿದ್ದ ಶೀರ್ಷಿಕೆ ವಿವಾದ ಈಗ ಸಂಪೂರ್ಣವಾಗಿ ಶಮನಗೊಂಡಿದೆ. ‘ಆರ್‌ಆರ್‌ಆರ್’ ಯಶಸ್ಸಿನ ಬಳಿಕ ರೂಪುಗೊಳ್ಳುತ್ತಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾಗೆ ಕಳೆದ ವರ್ಷ ನವೆಂಬರ್‌ನಲ್ಲಿ ‘ವಾರಣಾಸಿ’ ಎಂದು ಹೆಸರಿಡಲಾಗಿತ್ತು. ಆದರೆ, ಈ ಹೆಸರು ತಮ್ಮ ಬಳಿ ನೋಂದಾಯಿತವಾಗಿದೆ ಎಂದು ನಿರ್ದೇಶಕ ಸುಬ್ಬಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸೌಹಾರ್ದಯುತವಾಗಿ ಬಗೆಹರಿದ ಟೈಟಲ್ ವಿವಾದ

ಫಿಲ್ಮ್ ಚೇಂಬರ್ ಕಾರ್ಯದರ್ಶಿ ಪ್ರಸನ್ನ ಕುಮಾರ್ ಹಾಗೂ ನಿರ್ದೇಶಕರ ಸಂಘದ ಮಾಜಿ ಅಧ್ಯಕ್ಷ ವೀರಶಂಕರ್ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಸುಬ್ಬಾರೆಡ್ಡಿ ಅವರು ‘ವಾರಣಾಸಿ’ ಶೀರ್ಷಿಕೆಯ ಹಕ್ಕನ್ನು ರಾಜಮೌಳಿ ಅವರ ನಿರ್ಮಾಪಕ ಕೆ.ಎಲ್. ನಾರಾಯಣ ಅವರಿಗೆ ಹಸ್ತಾಂತರಿಸಿದ್ದಾರೆ.

“2023ರಲ್ಲೇ ಈ ಶೀರ್ಷಿಕೆ ನೋಂದಾಯಿಸಿ ಕಥೆ ಸಿದ್ಧಪಡಿಸಿದ್ದೆ. ಆದರೆ ತೆಲುಗು ಚಿತ್ರರಂಗದ ಕೀರ್ತಿ ಹೆಚ್ಚಿಸುವ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಈ ದೈತ್ಯ ಯೋಜನೆಗಾಗಿ ಸಂತೋಷದಿಂದ ಟೈಟಲ್ ಬಿಟ್ಟುಕೊಡುತ್ತಿದ್ದೇನೆ” ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಇದರಿಂದಾಗಿ ‘ವಾರಣಾಸಿ’ ಸಿನಿಮಾದ ಹಾದಿ ಸುಗಮವಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಇಮ್ಮಡಿಗೊಂಡಿದೆ.

Must Read