ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ ಹಾಗೂ ಐಆರ್‌ಸಿಟಿಸಿ ರೈಲ್ವೆ ಮುಂಗಡ ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಇಲ್ಲಿಯವರೆಗೂ ರೈಲ್ವೆ ಪ್ರಯಾಣಿಕರು 120 ದಿನಗಳ ಮುಂಚಿತವಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಆದರೆ, ನವೆಂಬರ್ 1 ರಿಂದ 60 ದಿನದ ಮೊದಲು ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದೆ.
ಅಂದರೆ, ರೈಲ್ವೆ ಪ್ರಯಾಣಿಕರು 60 ದಿನಗಳ ಮುಂಚಿತವಾಗಿ ಮಾತ್ರವೇ ರಿಸರ್ವೇಷನ್ ಟಿಕೆಟ್ ಬುಕ್ಕಿಂಗ್ ಮಾಡಲು ಸಾಧ್ಯವಾಗಲಿದೆ.
ಮುಂಗಡ ರೈಲು ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮಗಳು ನವೆಂಬರ್ 1 ರ ಮೊದಲು ಮಾಡಿದ ಬುಕಿಂಗ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಕ್ಟೋಬರ್ 31 ರವರೆಗೆ ಮಾಡಿದ ಎಲ್ಲಾ ಬುಕಿಂಗ್‌ಗಳು ಹಾಗೆಯೇ ಉಳಿಯುತ್ತವೆ. ವಿದೇಶಿ ಪ್ರವಾಸಿಗರಿಗೆ 365 ದಿನಗಳ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಸಾಮಾನ್ಯವಾಗಿ ರೈಲ್ವೆ ಟಿಕೆಟ್‌ಅನ್ನು ತಿಂಗಳುಗಳ ಮುಂಚಿತವಾಗಿ ಬುಕ್ ಮಾಡಿಕೊಳ್ಳುತ್ತಾರೆ. ಕೆಲವರು ಟಿಕೆಟ್ ಬುಕ್ಕಿಂಗ್ ವಿಂಡೋ ಓಪನ್ ಆಗೋದನ್ನೇ ಕಾಯ್ತಾ ಇರ್ತಾರೆ. ಇಲ್ಲಿಯವರೆಗೂ ಒಬ್ಬ ವ್ಯಕ್ತಿ 120 ದಿನಗಳ ಅಂದರೆ 4 ತಿಂಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಈ ನಿಯಮವನ್ನೇ ಬದಲಾಯಿಸಲಾಗಿದೆ. ಈ ಹಿಂದೆ ಶಿಫಾರಸು ಬಂದಂತೆ ರೈಲ್ವೆ ಟಿಕೆಟ್ ಬುಕ್ಕಿಂಗ್‌ಅನ್ನು 120 ದಿನಗಳ ಬದಲು 60 ದಿನಗಳಿಗೆ ಇಳಿಸಲಾಗಿದೆ.
ಈ ಕುರಿತಾಗಿ ಗುರುವಾರ ರೈಲ್ವೆ ಇಲಾಖೆ ನೋಟಿಫಿಕೇಷನ್‌ಅನ್ನೂ ಪ್ರಕಟಿಸಿದೆ.ಭಾರತೀಯ ರೈಲ್ವೇಯ ಹೊಸ ನಿಯಮಗಳ ಪ್ರಕಾರ, ಈಗ ನೀವು ರೈಲುಗಳಲ್ಲಿ ಕೇವಲ 60 ದಿನಗಳ ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ, 120 ಅಲ್ಲ. ಭಾರತೀಯ ರೈಲ್ವೇ ARP ಅಂದರೆ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 2 ತಿಂಗಳಿಗೆ ಇಳಿಸಿದೆ. ಭಾರತೀಯ ರೈಲ್ವೆಯ ಈ ಹೊಸ ನಿಯಮಗಳು ನವೆಂಬರ್ 1 ರಿಂದ ಜಾರಿಗೆ ಬರಲಿವೆ.
ಈ ಬೆಳವಣಿಗೆಯ ನಂತರ, IRCTC ಯ ಷೇರುಗಳು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಗುರುವಾರ ಮಧ್ಯಾಹ್ನದ ವೇಳೆ ಶೇ. 2.2ರಷ್ಟು ಕುಸಿತ ಕಂಡು 867.60 ರೂಪಾಯಿಗೆ ತಲುಪಿದೆ. ಮುಂಗಡ ಕಾಯ್ದಿರಿಸುವಿಕೆಗಾಗಿ ಕಡಿಮೆ ಸಮಯದ ಮಿತಿಗಳು ಈಗಾಗಲೇ ಜಾರಿಯಲ್ಲಿರುವ ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್‌ನಂತಹ ಕೆಲವು ಹಗಲಿನ ಎಕ್ಸ್‌ಪ್ರೆಸ್ ರೈಲುಗಳ ಸಂದರ್ಭದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.