ಯಕ್ಷಗಾನ ಪ್ರಿಯರಿಗೆ ಸಿಹಿ ಸುದ್ದಿ: ಮುಂದಿನ ತಿರುಗಾಟದಿಂದ ಕಟೀಲು ಏಳನೇ ಮೇಳ ಆರಂಭ

ಹೊಸದಿಗಂತ ವರದಿ, ಮಂಗಳೂರು:

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಮಂಡಳಿಯ ಮುಂದಿನ ತಿರುಗಾಟ ಏಳು ಮೇಳಗಳೊಂದಿಗೆ ನಡೆಯಲಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದರು.

ಕಟೀಲು ದೇಗುಲದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಭಾನುವಾರ ಮಹಾಪೂಜೆಯ ಬಳಿಕ ಹೂಪ್ರಶ್ನೆಯ ಮೂಲಕ ದೇವರ ಒಪ್ಪಿಗೆ ಸಿಕ್ಕಿದ್ದು ನವೆಂಬರ್ 16 ರಂದು ನೂತನ ಮೇಳದೊಂದಿಗೆ ತಿರುಗಾಟ ನಡೆಯಲಿದೆ.

ಕಟೀಲು ಒಂದನೇ ಮೇಳ ಯಾವಾಗ ಆರಂಭವಾಗಿತ್ತು ಎಂಬ ಮಾಹಿತಿ ಇಲ್ಲ. ಎರಡನೆಯ ಮೇಳ 1975 ರಲ್ಲಿ . ಮೂರನೆಯ ಮೇಳ 82ರಲ್ಲಿ ನಾಲ್ಕನೆಯ ಮೇಳ 93 ರಲ್ಲಿ, 2010ರಲ್ಲಿ ಐದನೆಯ ಮೇಳ, 2013 ರಲ್ಲಿ ಆರನೆಯ ಮೇಳ ಆರಂಭವಾಗಿತ್ತು. ವರ್ಷಂಪ್ರತಿ ನೋಂದಾವಣೆಯಾಗುತ್ತಿರುವ ಆಟಗಳ ಸಂಖ್ಯೆ ಹೆಚ್ಚುತ್ತಿದ್ದು ಏಳನೆಯ ಮೇಳ ಆರಂಭಿಸಲಾಗುತ್ತಿದೆ. ವಾರ್ಷಿಕ ಸುಮಾರು 1050 ಪ್ರದರ್ಶನಗಳಲ್ಲಿ 450 ಆಟ ಖಾಯಂ ಆಗಿದ್ದರೆ240 ಆಟ ತತ್ಕಾಲ್ ಅಡಿ ಕೊಡಲಾಗುತ್ತಿದೆ. ಮುಂಗಡ ಬುಕ್ಕಿಂಗ್ ಏಳು ಸಾವಿರಕ್ಕೂ ಹೆಚ್ಚು ಆಟಗಳಿದ್ದು ಕಳೆದ ವರ್ಷ 844 ಆಟ ಬುಕ್ಕಿಂಗ್ ಆಗಿವೆ.

ನವೆಂಬರ್‌ನಲ್ಲಿ ದೀಪೋತ್ಸವದ ಬಳಿಕ ಮೇಳದ ತಿರುಗಾಟ ನಡೆಯಲಿದೆ. ನೂತನ ಮೇಳಕ್ಕೆ ಅಗತ್ಯವಿರುವ ಚಿನ್ನದ ಕಿರೀಟ ಸೇರಿದಂತೆ ಕೆಲವು ವಸ್ತುಗಳು ಈಗಾಗಲೇ ದೇವಳದಲ್ಲಿದ್ದು, ಈ ವರುಷ ಎರಡು ಬೆಳ್ಳಿಯ ಕಿರೀಟಗಳು ಮೇಳಕ್ಕೆ ಬಂದಿವೆ. ಅಲ್ಲದೆ ಅನೇಕ ವಸ್ತುಗಳನ್ನು ನೀಡಲು ಭಕ್ತರು ಮುಂದೆ ಬಂದಿದ್ದಾರೆ. ಈ ಹಿಂದೆಯೂ ಮೇಳ ಹೊಸದಾಗಿ ಮಾಡುವ ಸಂದರ್ಭ ದೇವಸ್ಥಾನಕ್ಕೆ ಯಾವುದೇ ಖರ್ಚು ಬಂದಿಲ್ಲ. ಭಕ್ತರೇ ಒದಗಿಸಿಕೊಟ್ಟಿದ್ದಾರೆ.

ಮೇಳದಲ್ಲಿ ನ್ಯಾಯವಾದಿಗಳು, ಇಂಜಿನಿಯರ್, ಉಪನ್ಯಾಸಕರು, ಸರಕಾರಿ ಉದ್ಯೋಗಿಗಳು, ಡಾಕ್ಟರೇಟ್ ಮಾಡಿದವರು ಹೀಗೆ ವಿವಿಧ ಉದ್ಯೋಗಗಳಲ್ಲಿ ಇರುವವರು, ವಿದ್ಯಾವಂತರೂ ಇದ್ದಾರೆ. ಜೊತೆಗೆ ಹೊಸ ಕಲಾವಿದರೂ ಇದ್ದಾರೆ. ಹೊಸ ಕಲಾವಿದರಿಗೆ ಯಕ್ಷಗಾನ ತರಬೇತಿ ನೀಡಲು ತರಬೇತಿ ಶಾಲೆಯ ಚಿಂತನೆ ಇದೆ. ಬೆಂಗಳೂರು, ಮೈಸೂರು ಸೇರಿದಂತೆ ಕರಾವಳಿ ಹೊರತು ಪಡಿಸಿದ ಜಿಲ್ಲೆಗಳಿಂದಲೂ ಯಕ್ಷಗಾನಕ್ಕೆ ಬೇಡಿಕೆ ಬಂದಿದ್ದು, ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಿ, ಪ್ರದರ್ಶನಕ್ಕೆ ಗಮನ ಹರಿಸಲಾಗುವುದು ಎಂದು ಶ್ರೀಹರಿ ಆಸ್ರಣ್ಣ ತಿಳಿಸಿದರು.

ದೇಗಲದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ ಕೊಡೆತ್ತೂರುಗುತ್ತು, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ಚಂದ್ರ ಶೆಟ್ಟಿ, ಐಕಳ ಗಣೇಶ ಶೆಟ್ಟಿ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!